ಒಂದು ಒಳ್ಳೆಯ ನುಡಿ - 204

ಒಂದು ಒಳ್ಳೆಯ ನುಡಿ - 204

* ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ, ಜವಾಬ್ದಾರಿ. ನಾವೇನು ಮಾಡುತ್ತೇವೆ, ಬೇರೆಯವರ ಅಂಗಳ, ಪರಿಸರದತ್ತ ಕಣ್ಣು ಹಾಯಿಸಿ, ಬೆನ್ನಹಿಂದೆ ಹೇಳಿಕೊಂಡು ನಗುತ್ತೇವೆ. ಇದು ಮನುಷ್ಯ ಸಹಜ ಗುಣ. ಬಂಧುಗಳೇ ಇದನ್ನು ಮಾಡದೆ, ನಮ್ಮ ಮನೆ ಅಂಗಳ, ಪರಿಸರವನ್ನು ಮೊದಲು ಸ್ವಚ್ಛ ಮಾಡೋಣ, ಅನಂತರ ಇತರರತ್ತ ಗಮನಹರಿಸೋಣ. ನಾವೇ ಸರಿಯಾಗಿಲ್ಲದೆ, ಬೇರೆಯವರು ಸರಿಯಿಲ್ಲವೆಂದು ಹೇಳುವ ಅಧಿಕಾರವಾದರೂ ನಮಗೆಲ್ಲಿದೆ ಅಲ್ಲವೇ?

* ತಮ್ಮ ಜೀವನದ ನೈಜವಾದ ಅನುಭವಗಳಿಂದ ಹೊರಹೊಮ್ಮಿದ ಪ್ರಾಮಾಣಿಕ ಅನಿಸಿಕೆಗಳೇ ಮಹಾತಪಸ್ವಿಗಳ,   ಮೇಧಾವಿಗಳ, ಸಂತಶ್ರೇಷ್ಠರ, ಯೋಗಿಗಳ ಹಿತವಚನಗಳಾಗಿವೆ. ಯಾರನ್ನೂ ಒತ್ತಾಯಿಸದೆ ಸತ್ಯಾಸತ್ಯತೆಯ ವಿವೇಚನೆಯನ್ನು ಜನಸಾಮಾನ್ಯರಿಗೇ ಬಿಟ್ಟುಬಿಟ್ಟರು. ಪ್ರತಿಯೋರ್ವನೂ ಬುದ್ಧಿಶಕ್ತಿ ಮತ್ತು ಜಾಣ್ಮೆಯನ್ನು ಉಪಯೋಗಿಸಿ ಮುಂದಡಿಯಿಡಬೇಕೆಂದು ಕರೆಯಿತ್ತರು. ಈ ವಿಚಾರಗಳೆಲ್ಲ ನಮ್ಮ ಬದುಕಿನ ತಳಪಾಯ ಎಂಬುದರಲ್ಲಿ ಎರಡು ಮಾತಿಲ್ಲ.

* ಬದುಕಿನ ದಾರಿಯ ಎಲ್ಲಾ ಬಾಗಿಲುಗಳು ಮುಚ್ಚಿತೆಂದು ಹತಾಶರಾಗಬಾರದು. ಕಷ್ಟ ಮನುಜನಿಗಲ್ಲದೆ ಮರಕ್ಕೆ ಬರಲು ಸಾಧ್ಯವೇ? ಹುಟ್ಟಿಸಿದ ದೇವನಿಗೆ ಹುಲ್ಲು ಮೇಯಿಸಲು ತಿಳಿಯದೇ? ಕತ್ತಲಾಯಿತೆಂಬ ಭ್ರಮೆಗೆ ಒಳಪಡಬಾರದು. ಬೆಳಕನ್ನು ಅರಸುತ್ತಾ ಹೋಗಬೇಕು. ಯಾವುದಾದರೂ ಒಂದು ದಿಕ್ಕಿನಲ್ಲಿ ಬೆಳಕಿನ ಆಸರೆ ಕಾಣಬಹುದು. ಕೈಹಿಡಿದು ಮೇಲಕ್ಕೆತ್ತುವ ಸಹೃದಯರು ಸಿಕ್ಕೇ ಸಿಗುವರು. ಹಾಗಾಗಿ ಹತಾಶೆ, ಸೋಲು, ದು:ಖ ಬಂದಾಗ ಸೋತು ಹಿಮ್ಮೆಟ್ಟದಿರೋಣ. ಬದುಕಿನ ಪಾಠವೆಂದು ತಿಳಿಯೋಣ.

* ನಮ್ಮ ಜೀವನದ ಹಾದಿಯಲ್ಲಿ ಸ್ವಪ್ರಯತ್ನವೆನ್ನುವುದು ಬಹಳ ಅವಶ್ಯ. ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ಕುಳಿತುಕೊಳ್ಳಬಾರದು. ನಮ್ಮ ಶ್ರಮವೂ ಬೇಕಲ್ಲ? ಇತರರನ್ನು ಆಶ್ರಯಿಸುವ ಬುದ್ಧಿಯೂ ತರವಲ್ಲ. ಅಂಥವರು ಜೀವಮಾನವಿಡೀ ಕಲಿಯಲಾರರು. ನಮ್ಮ ಮನೆಯ ಮಕ್ಕಳಿಗೂ ಸ್ವಪ್ರಯತ್ನದ ಅರಿವನ್ನು ಚಿಕ್ಕಂದಿನಿಂದಲೇ ಕಲಿಸಿ ಬೆಳೆಸಬೇಕು.

* ದಾಸರೆಂದರೆ ಪುರಂದರ ದಾಸರಯ್ಯ. ಅವರ ಒಂದೊಂದು ಕೀರ್ತನೆಗಳಲ್ಲೂ ಬದುಕಿನ ಸಾರವಡಗಿದೆ. ಕಷ್ಟ -ಸುಖಗಳ ಅನುಭವಾಮೃತದ ತಿರುಳಿದೆ. ತನ್ನ ರಚನೆಗಳ ಮೂಲಕ ಭಗವಂತನಿಗೆ ಹತ್ತಿರವಾಗುವ ತತ್ವವಿದೆ. ಎಲ್ಲವೂ ನಿನಗರ್ಪಣೆ, ಕಾಯಕದಲ್ಲಿ ದೇವನಡಗಿದ್ದಾನೆ ಎನುವ ಭಾವವಿದೆ. ದಾಸಶ್ರೇಷ್ಠ ಪುರಂದರ ದಾಸರು ನಮ್ಮ ನೆಲದ ಅನರ್ಘ್ಯ ರತ್ನ,ಅವರನ್ನು ಪ್ರತೀ ದಿನ ನೆನೆಯೋಣ.

* ಮುಖವೇ ಮನಸ್ಸಿನ ಕನ್ನಡಿಯಂತೆ. ಕಣ್ಣುಗಳು ನಮ್ಮ ದೇಹದ ಕಿಟಕಿಗಳು. ಮನೆಯ ಕಿಟಕಿ ಬಾಗಿಲುಗಳಲ್ಲಿ ಹೇಗೆ ಗಾಳಿ ಬೆಳಕು ಬರುತ್ತದೋ ಹಾಗೆ ಶುದ್ಧ, ಸ್ವಚ್ಛದನ್ನು ಮಾತ್ರ ಕಣ್ಣುಗಳೆಂಬ ಕಿಟಕಿಯಲ್ಲಿ ನೋಡಿ, ಕೈಗೊಳ್ಳಬೇಕು. ಆ ಕೆಲಸ ಮಾಡದಿರೆಂಬ ಆಜ್ಞೆಯನ್ನು ಪಾಲಿಸಬೇಕು. ಕಣ್ಣುಗಳು ಆರೋಗ್ಯವಾಗಿದ್ದಾಗ ಬೆಳಕು ಸಿಗುತ್ತದೆ, ಎಲ್ಲವನ್ನೂ ನೋಡಬಹುದು. ಮಬ್ಬು ಆವರಿಸಿದರೆ, ಪೊರೆ ಬಂದರೆ ಬೆಳಕೂ ಇಲ್ಲ, ನೋಡಲೂ ಸಾಧ್ಯವಿಲ್ಲ, ಎಲ್ಲವೂ ಕತ್ತಲೆಮಯ. ಅದೇ ರೀತಿ ಮನಸ್ಸಿನೊಳಗೆ ಕತ್ತಲೆ ಆವರಿಸಿದರೆ ಶೂನ್ಯವಲ್ಲವೇ? ಮನಸ್ಸನ್ನು ಸದಾ ಶುದ್ಧವಾಗಿಟ್ಟು ಕಣ್ಣುಗಳೆಂಬ ಕಿಟಕಿ ಮೂಲಕ ಬೆಳಕನ್ನು ಪಡೆದು ಪ್ರಪಂಚವನ್ನು ನೋಡೋಣ ಬಂಧುಗಳೇ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ