ಒಂದು ಒಳ್ಳೆಯ ನುಡಿ (205) - ಹುತಾತ್ಮರ ದಿನ

ಒಂದು ಒಳ್ಳೆಯ ನುಡಿ (205) - ಹುತಾತ್ಮರ ದಿನ

ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ “೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ”. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ ಇದರ ಹಿಂದಿನ ನೋವು, ದು:ಖ ಒಂದೂ ಗೊತ್ತಿರಲಿಲ್ಲ.

ನಮ್ಮ ರಾಷ್ಟ್ರಪಿತ ಬಾಪೂಜಿಯವರನ್ನು ನಾವು ಕಳಕೊಂಡ ದಿನ. ಸತ್ಯ, ಶಾಂತಿ, ಅಹಿಂಸೆ, ತ್ಯಾಗವೆಂಬ ಬಲವಾದ ಅಸ್ತ್ರಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ, ದೇಶ ಸ್ವತಂತ್ರವಾಗಲು ಕಾರಣರಾದ ಮಹಾಮೇರು ಪರ್ವತ, ಮಹಾನ್ ಚೇತನ, ಮಹಾಶಕ್ತಿಯಾದ ಮಹಾತ್ಮರು ದೇಶಕ್ಕಾಗಿ ಬಲಿಯಾದ ದಿನ. ಈ ದಿನವನ್ನು ‘ಹುತಾತ್ಮರ ದಿನ’ ವೆಂದು ಘೋಷಿಸಲಾಯಿತು. ಅವರ ಸೇವೆಯನ್ನು ಒಂದು ಕ್ಷಣ ನೆನೆಯುವ ದಿನ.

ನಮ್ಮ ರಾಷ್ಟ್ರದ ಹಿತರಕ್ಷಣೆಗಾಗಿ ಹಗಲಿರುಳು ದುಡಿಯುವ ವೀರ ಯೋಧರ ಬಲಿದಾನ ಅಳತೆಗೆ ಸಿಗಲಾರದು. ಅವರೆಲ್ಲರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಎಲ್ಲರನ್ನೂ ಸ್ಮರಿಸುವ ದಿನ. ಒಂದಷ್ಟು ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ತ್ಯಾಗದ, ಹಿಂದಿನ ಘಟನೆಗಳನ್ನು ಓದಿದಾಗ ಮೈರೋಮಾಂಚನವಾಗುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ನಂತರದಲ್ಲಿ  ಹುತಾತ್ಮರಾದ ಎಲ್ಲರನ್ನೂ ನೆನಪಿಸಿ, ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಗಾಂಧೀಜಿಯವರ ಸಮಾಧಿ ರಾಜಘಾಟ್ ಗೆ ಹೋಗಿ  ದೇಶದ ಗಣ್ಯಾತಿಗಣ್ಯರೆಲ್ಲ ಪುಷ್ಪ ನಮನ ಸಲ್ಲಿಸುತ್ತಾರೆ. ಸರ್ವಧರ್ಮ ಪ್ರಾರ್ಥನೆ, ಸಾಮೂಹಿಕ ಭಜನೆ ಹಮ್ಮಿಕೊಳ್ಳುವ ಮೂಲಕ ನಮನ ಸಲ್ಲಿಸಲಾಗುತ್ತದೆ. ಜಿಲ್ಲಾಡಳಿತವತಿಯಿಂದ ಆಯಾಯ ಜಿಲ್ಲಾಮಟ್ಟದ ಕಾರ್ಯಕ್ರಮವಿಟ್ಟುಕೊಂಡು ಅಗಲಿದ ಹುತಾತ್ಮರನ್ನು ನೆನೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ನಮನ ಸಲ್ಲಿಸಬೇಕಾದ್ದು ಆದ್ಯ ಕರ್ತವ್ಯ. ನಮ್ಮ ಮಕ್ಕಳಿಗೆ ಈ ದಿನದ ಹಿಂದಿನಲ್ಲಿ ರಾಜಕೀಯ ವ್ಯಕ್ತಿಗಳು, ರಾಷ್ಟ್ರೀಯ ನಾಯಕರೆನಿಸಿಕೊಂಡವರ ಕಷ್ಟ,ಹೋರಾಟ, ಪಟ್ಟಪಾಡು ವಿವರವನ್ನು ನಾವು ನೀಡಬೇಕು. ರಾಷ್ಟ್ರಭಕ್ತಿ, ರಾಷ್ಟ್ರಪ್ರೀತಿ ಗೌರವ ಸಲ್ಲಿಸುವಿಕೆಯನ್ನು ಮನದಟ್ಟು ಮಾಡಬೇಕು.

ಬಾಪೂರವರು ಸತ್ಯದ ಶೋಧನೆಯನ್ನು ಅಹಿಂಸೆಯ ಮೂಲಕ ಸಿದ್ಧಿಸಿಕೊಂಡವರು. ಭಗವಂತನ ಸಾಕ್ಷಾತ್ಕಾರಕ್ಕೆ ಅಹಿಂಸೆಯ ಮಾರ್ಗ ಹಿಡಿದವರು. ಸ್ವಾವಲಂಬನೆ, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವುದು, ಶ್ರಮದ ಮಹತ್ವಕ್ಕೆ ಆದ್ಯತೆ ನೀಡಿದವರು. ಎಲ್ಲಿ ‘ಪ್ರೇಮ, ಪ್ರೀತಿ, ದಯೆ, ಕರುಣೆ, ತ್ಯಾಗ, ಸಹನೆ, ಧ್ಯೇಯ’ ಇದೆಯೋ ಅಲ್ಲಿ  ‘ಹಿಂಸೆ’ ಯ ಪ್ರಶ್ನೆಯೇ ಬರಲಾರದು ಎಂಬುದನ್ನು ತೋರಿಸಿಕೊಟ್ಟವರು. ಕ್ರೌರ್ಯಕ್ಕೆ ಕ್ರೌರ್ಯ, ದ್ವೇಷಕ್ಕೆ ದ್ವೇಷ, ಕಿಚ್ಚಿಗೆ ಕಿಚ್ಚು ಮಾಡುತ್ತಾ ಹೋದರೆ ಸರ್ವನಾಶವಾಗಬಹುದು, ಅದರ ಬದಲು ಅಲ್ಲಿ ಪ್ರೀತಿ ಪ್ರೇಮ ಬಿತ್ತೋಣವೆಂದರು. ಹೃದಯಪರಿವರ್ತನೆ ಬಹುಮುಖ್ಯ.

ಈ ದಿನವನ್ನು ಸರ್ವೋದಯ ದಿನವೆಂದು ಸಹ ಹೇಳುವರು. “ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು” ತತ್ವವನ್ನು ಸಾರಿದರು ‘ಹೆತ್ತ ತಾಯಿಯ ಪ್ರೇಮ ಸಹನೆಯ ಪ್ರತೀಕ’ ಪ್ರತಿಯೋರ್ವನಲ್ಲೂ ಈ ಗುಣ ಬಂದಾಗ ಜಗಳ,ದ್ ವೇಷಕ್ಕೆ ಆಸ್ಪದವಿಲ್ಲ, ಹಿಂಸೆಯ ಮಾತೇ ಇಲ್ಲ ಎಂದ ಮಹಾನ್ ವ್ಯಕ್ತಿತ್ವ ಬಾಪೂ ಅವರದು.

ಯುವಜನತೆಗೆ ಕಿವಿಮಾತೊಂದನ್ನು ಸದಾ ಹೇಳುತ್ತಿದ್ದರಂತೆ 'ನೀವೇ ನಾಳಿನ ದೇಶದ, ಮನೆಯ ಆಸ್ತಿಗಳು. ಹಾಗೆಯೇ ಹೊಣೆಗಾರಿಕೆ ಸಹ ನಿಮ್ಮದೇ. ಮನಸ್ಸಿನಲ್ಲಿ ದೃಢ ಸಂಕಲ್ಪ, ನಾಳಿನ ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ಕೆಲಸ ನಿರ್ವಹಿಸಿ. ಅಕ್ಷರ ಮತ್ತು ಕಾಲೇಜು ಅಧ್ಯಯನ ಜೀವನದ ದಾರಿಗೆ ಅಗತ್ಯ. ನಿರ್ಭಯತೆ ದೂರಮಾಡಿ. ಸತ್ಯವಂತಿಕೆಯೇ ಬದುಕ ಹಾದಿಯ ಕೀಲಿಕೈ, ಸುಳ್ಳನ್ನು ತ್ಯಜಿಸಿ. ಸಂಸ್ಕೃತಿಯೇ ಅಡಿಪಾಯ, ಅದರ ಮೇಲೆ ನಡತೆಯೆಂಬ ಸೌಧ ಕಟ್ಟಿ.ಬಟ್ಟೆ, ಗುಣ, ಮಾತು, ಕೃತಿ, ಆತಿಥ್ಯ, ನಡವಳಿಕೆ ಎಲ್ಲದರಲ್ಲೂ ಸಂಸ್ಕೃತಿ ಬಿಂಬಿಸುತ್ತಿರಬೇಕು.ಅಹಿಂಸೆ ಸರ್ವಶ್ರೇಷ್ಠ. ಧೀರರ ಹಾದಿ, ಹೇಡಿಗಳದಲ್ಲ. ಸ್ವರಾಜ್ಯ ಪವಿತ್ರವಾದ ಆಲೋಚನೆ. ಅದೊಂದು ಆತ್ಮಾನುಶಾಸನ. ಆತ್ಮ ನಿಗ್ರಹ. ಬೆಳಕು ಮತ್ತು ಬದುಕಿನ ಮೂಲವೇ ಭಗವಂತ. ಆತ ಅಂತರ್ ಪ್ರಜ್ಞೆ, ಕಣ್ಣಿಗೆ ಗೋಚರವಾಗದ, ಒಳಗಣ್ಣ ತೆರೆಸುವ ಅಮೋಘಶಕ್ತಿ. ದಾರಿ ಗುರಿ ಎರಡೂ ಒಂದೇ ಆಗಿರಲಿ. ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ, ಅದೊಂದು ಶೀಲ ಸಂವರ್ಧನೆ, ಕರ್ತವ್ಯಪ್ರಜ್ಞೆ, ಸಾಮಾಜಿಕ ಅರಿವು. ಸೋಲು-ಗೆಲುವು ಸಾಮಾನ್ಯ, ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ. ಹೆತ್ತವರನ್ನು ಕಡೆಗಣಿಸದಿರಿ ಭೂಮಿಗೆ ತಂದ ಪ್ರತ್ಯಕ್ಷ ದೇವರವರು. ಪಾಪಪೂರಿತ ವಿಚಾರಗಳನ್ನು ದೂರಮಾಡಿ. ನಂಬಿಕೆಯಿರಲಿ, ಸಾಧಿಸುವೆನೆಂಬ ಛಲವಿರಲಿ.' ಎಂತಹ ನುಡಿಗಳಲ್ಲವೇ?

ಸರ್ವರ ಹಿತಕ್ಕಾಗಿ, ತಾಯ್ನಾಡ ರಕ್ಷಣೆಗಾಗಿ ಹಗಲಿರುಳು ಹೋರಾಡಿ ಮಡಿದ ಎಲ್ಲರನ್ನೂ ನೆನೆಯೋಣ, ನುಡಿನಮನ ಸಲ್ಲಿಸೋಣ. ಬಾಪೂರವರ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಅಳಿಲಸೇವೆ ಸಲ್ಲಿಸೋಣ.

ಜೈ ಭಾರತ್ ಮಾತಾ

ನನ್ನ ದೇಶ ನನ್ನ ಜನ

ನಾವೆಲ್ಲರೊಂದೇ ಮನ

-ರತ್ನಾ ಕೆ.ಭಟ್ ತಲಂಜೇರಿ

(ಆಕರ: ಸಂಸ್ಕೃತಿ ಸಂಚಾರ) ಚಿತ್ರ ಕೃಪೆ: ಇಂಟರ್ನೆಟ್ ತಾಣ