ಒಂದು ಒಳ್ಳೆಯ ನುಡಿ (214) - ರಾಗಿ ಮುದ್ದೆ

ಒಂದು ಒಳ್ಳೆಯ ನುಡಿ (214) - ರಾಗಿ ಮುದ್ದೆ

ರಾಗಿ ಮುದ್ದೆ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಹಳ್ಳಿ ಸೊಗಡು. ಸಕ್ಕರೆ ನಾಡು ಮಂಡ್ಯದಲ್ಲಂತೂ ತುಂಬಾ ಫೇಮಸ್ಸು. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶ ಈ ರಾಗಿ ಮುದ್ದೆಯಲ್ಲಿರುತ್ತದೆ. ಹಾಗಾಗಿ ಮುದ್ದೆ ತಿಂದ ಜೀವ ಗಟ್ಟಿ ಅಂತ ನಾನು ಕೇಳಿದ್ದೇನೆ. ಮುದ್ದೆಯನ್ನು ತಿಂದು ಗೊತ್ತಿದ್ದರೆ ಅವರಿಗೆ ಇಷ್ಟ ಆಗದೇ ಇರೋದಿಲ್ಲ. ನಮ್ಮೂರಲ್ಲಿ ಅನ್ನ ಸಾರು ತಿನ್ನುವುದರಿಂದ ಈ ರಾಗಿ ಮುದ್ದೆ ನಮಗೆ ಅಷ್ಟು ಹಿಡಿಸುವುದಿಲ್ಲ. ರಾಗಿ ಜೀವಕ್ಕೆ ತುಂಬಾ ತಂಪು ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಮುದ್ದೆಗೆ ಕಾಂಬಿನೇಷನ್ ಆಗಿ ಸೊಪ್ಪು ಸಾರು, ಉಪ್ಸಾರು, ಅವರೆಕಾಳು ಸಾರು ಮಾಡುತ್ತಾರೆ. ಇವೆಲ್ಲದಕಿಂತ ನಾಟಿಕೋಳಿ ಸಾರು, ಮಟನ್ ಸಾರು ತುಂಬಾ ಬೆಸ್ಟ್ ಅಂತ ಕೇಳಿದ್ದು ಬಿಟ್ಟರೆ ನಾನು ಮಾತ್ರ ತಿಂದಿಲ್ಲ. ಮುದ್ದೆಯ ಮೇಲೆ ಸ್ವಲ್ಪ ತುಪ್ಪ ಸವರಿ ಬಿಸಿ-ಬಿಸಿ ಸಾರು ಹಾಕಿ ತಿನ್ನುತ್ತಿದ್ದರೆ ಸ್ವರ್ಗ.. ಅಂತ ಅಲ್ಲಿ ಇಲ್ಲಿ ಮೊಬೈಲ್ ನಲ್ಲಿ ನೋಡಿದ್ದೇನೆ. ನನಗೂ ರಾಗಿ ಮುದ್ದೆ ಅಂದ್ರೆ ತುಂಬಾ ಇಷ್ಟ. ನಾನೊಮ್ಮೆ ಮುದ್ದೆ ಮಾಡೋಣ ಅಂತ ಕಿಚನ್ ಗೂ ಹೋಗಿದ್ದೆ. ಆದರೆ ಮತ್ತೆ ನಾನು ಮಾಡಿದ ಅವಾಂತರ ನೋಡಿ ತಲೆಬಿಸಿಯಾಗಿತ್ತು. ಹಿಟ್ಟು ಕಲಸಿ ಬಿಸಿ ಮಾಡುವಾಗ ಸೀದು ಹೋಗಿತ್ತು. ಆಮೇಲೆ ಅಮ್ಮನ ಕೈಯಲ್ಲಿ ಸರಿಯಾಗಿ ಬೈಸಿಕೊಂಡಿದ್ದೆ. ಅಲ್ಲಿಗೆ ರಾಗಿ ಮುದ್ದೆ ತಿನ್ನುವ ಆಸೆ ನೀರಲ್ಲಿ ಹೋಮವಾದಂತೆ ಆಯಿತು. ಮತ್ತೆ ಮುದ್ದೆ ಮಾಡುವ ಸಾಹಸಕ್ಕೆ ಕೈ ಹಾಕಲು ಹೋಗಲಿಲ್ಲ.

ಈ ವರ್ಷವನ್ನು ಕೇಂದ್ರ ಸರಕಾರ ‘ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಿದೆ. ಕಡಿಮೆ ನೀರನ್ನು ಬಯಸುವ, ಬರಗಾಲದಲ್ಲೂ ಪೌಷ್ಟಿಕವಾದ ಆಹಾರವನ್ನು ನೀಡುವ ಕಿರು ಧಾನ್ಯಗಳಾದ ರಾಗಿ, ಸಜ್ಜೆ, ನವಣೆ, ಬರಗು, ಸಾಮೆ ಮೊದಲಾದುವುಗಳನ್ನು ನಮ್ಮ ಆಹಾರದಲ್ಲಿ ಬಳಸಿಕೊಳ್ಳೋಣ. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ನಮ್ಮದೂ ಒಂದು ಪಾತ್ರ ಇರಲಿ ಅಲ್ಲವೇ?

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ