ಒಂದು ಒಳ್ಳೆಯ ನುಡಿ (215) - ಕ್ಷಮಿಸುವುದು ಸುಲಭವಲ್ಲ!

ಒಂದು ಒಳ್ಳೆಯ ನುಡಿ (215) - ಕ್ಷಮಿಸುವುದು ಸುಲಭವಲ್ಲ!

 "Father, forgive them for they do not know what they are doing? "  ಶಿಲುಬೆ ಏರಿದ್ದ ಏಸುವಿನ ನುಡಿಗಳಿವು. ಶಿಲುಬೆಯ ಏರಿದ್ದ ಏಸು ಅಂತಹ ಯಾತನೆಯಲ್ಲೂ ತನ್ನನ್ನು ಹಿಂಸಿಸುತ್ತಿರುವವರನ್ನು ಕ್ಷಮಿಸುವಂತೆ ದೇವರನ್ನು ಕೋರಲು ಹೇಗೆ ಸಾಧ್ಯವಾಯಿತು? ತಮಗೆ ಕೆಡುಕನ್ನು ಮಾಡಿದವರಿಗೆ ಸದ್ಗತಿದೊರಕಲೆಂದು ಕೋರುವುದು ಚಿಕ್ಕ ಸಂಗತಿಯಲ್ಲ. ಆತ ದೇವ ಮಾನವನಾದ್ದರಿಂದ ಆತನಿಂದ ಇದು ಸಾಧ್ಯವಾಯಿತೋ ತಿಳಿಯದು. ನಮ್ಮಿಂದ ಇಂತಹ ಮಾತುಗಳ ನಿರೀಕ್ಷೆಯ ಕನಸಲ್ಲೂ ಮಾಡಲಾಗದು. ತಮಗೆ ಸೂಜಿಯಲ್ಲಿ ಚುಚ್ಚಿದವರಿಗೆ ತ್ರಿಶೂಲದಲ್ಲಿ ಇರಿಯಲು ಬಯಸುವ ಮಂದಿಯೇ ಜಾಸ್ತಿ!                                         

ನನ್ನನ್ನು ಚಿಂತನೆಗೆ ದೂಡಿದ ಇನ್ನೊಂದು ಕಥೆ ಶಿಶುಪಾಲನದ್ದು. ಮಹಾಭಾರತದ ಶಿಶುಪಾಲನ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಕೃಷ್ಣ ಶಿಶುಪಾಲನ ನೂರು ತಪ್ಪುಗಳ ಮನ್ನಿಸಿದನು. ಶಿಶುಪಾಲ ನೂರಾಒಂದನೆಯ ತಪ್ಪು ಮಾಡಿದಾಗ ಆತನ ವಧೆಯಾಯಿತು. ತಪ್ಪುಗಳ ತಿದ್ದಿ ನಡೆಯುವ ವಿಪುಲ ಅವಕಾಶಗಳಿದ್ದರೂ ಶಿಶುಪಾಲ ಅದರ ಸದುಪಯೋಗ ಪಡೆದುಕೊಳ್ಳಲಿಲ್ಲ. ಕ್ಷಮೆ ಸುಲಭದಲ್ಲಿ  ದೊರಕುವುದಿಲ್ಲ, ಕ್ಷಮೆ ದೊರೆತಾಗ ನಾವು ಎಚ್ಚರದಿಂದ ಮತ್ತೆ ತಪ್ಪಾಗದಂತೆ ಹೆಜ್ಜೆಗಳ ಇಡುವುದು ಸೂಕ್ತ.                                                    

"An eye for an eye, a tooth for a tooth." ಎಂಬುದು ಜಗದ ನಿಯಮವಾದರೆ ಅಲ್ಲಿ ಶಾಂತಿಯ ನಿರೀಕ್ಷೆ ಕಷ್ಟ. ಯುದ್ಧಕ್ಕೆ ಯಾವಾಗಲೂ ಯುದ್ಧವೇ ಉತ್ತರವಾದರೆ ಶಾಂತಿಯ ಮಾತೆಲ್ಲಿ? ಹಾಗೆಂದ ಮಾತ್ರಕ್ಕೆ ತಾಳ್ಮೆಯ ಪರೀಕ್ಷೆ ಸಲ್ಲದು. ಮಾನವ ಅತಿಯಾದ ಆಸೆಯಿಂದ ಭೂಮಿಯ ಒಡಲನ್ನು ಬಗೆಯುತ್ತಾ ಸಾಗಿದರೆ ಭೂಮಿ ಕಂಪನದ ಉತ್ತರ ನೀಡಿ ಸರ್ವನಾಶಕ್ಕೆ ಕಾರಣವಾಗಬಹುದು ಎನ್ನುವುದನ್ನು ನಾವು ಮರೆಯಬಾರದು. ತಪ್ಪುಗಳ ಮನ್ನಿಸುವ ಗುಣ, ಆದ ತಪ್ಪುಗಳ ತಿದ್ದಿ ನಡೆಯುವ ಗುಣ ನಮ್ಮನಿಮ್ಮದಾಗಲಿ. ನಾವು ವಿವೇಕಿಗಳಾಗೋಣ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ