ಒಂದು ಒಳ್ಳೆಯ ನುಡಿ (218) - ದುಡ್ಡಿನ ದೊಡ್ಡಪ್ಪಂದಿರು !

ಒಂದು ಒಳ್ಳೆಯ ನುಡಿ (218) - ದುಡ್ಡಿನ ದೊಡ್ಡಪ್ಪಂದಿರು !

ಈಗಷ್ಟೇ ಒಂದು ವಿಡಿಯೋ ನೋಡಿ ತಲೆ ಸ್ವಲ್ಪ ಜಾಮ್ ಆಯಿತು. ನಿಮಗೂ ಅದನ್ನು ಹೇಳುತ್ತೇನೆ ಕೇಳಿ. ಎಷ್ಟೋ ಬಾರಿ ಯೂಟ್ಯೂಬ್ ಇನ್ಸ್ಟಾಗ್ರಾಮ್ ಅಲ್ಲಿ ಇಲ್ಲಿ ಈ ಇನ್ವೆಸ್ಟ್ ಮೆಂಟ್ ಬಗ್ಗೆ, ವಾಣಿಜೋದ್ಯಮದ ಬಗ್ಗೆ ಚೆನ್ನಾಗಿ ಸೂಟು ಬೂಟು ಹಾಕಿಕೊಂಡವರು ಕ್ಲಾಸ್ ಮಾಡುತ್ತೇನೆ ಎನ್ನುತ್ತಾರಲ್ಲ ಅದರ ಬಗ್ಗೆ.

ನಮಗೆ ನಮ್ಮದೇ ಓದು, ಉದ್ಯೋಗ, ದಾರಿ ಎಲ್ಲವೂ ಇದೆ. ಆದರೂ ಈ ಮಹಾತ್ಮರು ಅದ್ಯಾವುದೂ ಸರಿಯಿಲ್ಲ, ಇನ್ನೂ ಹೆಚ್ಚು ಹಣ, ಗಾಡಿ, ಮನೆ, ಆಸ್ತಿ ಮಾಡುವುದು ಹೇಗೆ ಎಂದು ಕಲಿಸುತ್ತೇನೆ ಎನ್ನುತ್ತಾರೆ. ನಮ್ಮ ಕನಸಿನ ಕಾರು ಮನೆಗಳನ್ನೇ ತೋರಿಸಿದಾಗ ಎಲ್ಲೋ ಒಂದೆಡೆ ಆಸೆ ಹುಟ್ಟುತ್ತದೆ. ಇನ್ನೊಂದೆಡೆ ಅಯ್ಯೋ ನಾನು ಮಾಡುತ್ತಿರುವುದು ಸಾಕೋ ಇಲ್ಲವೋ ಎಂಬ ಪ್ರಶ್ನೆ ಬರುತ್ತದೆ. ಆಮೇಲೆ ಅದಕ್ಕೊಂದು ಕೋರ್ಸ್ ಮಾಡಿ ಹಣ ತೆಗೆದುಕೊಳ್ಳುತ್ತಾರೆ. ಉದ್ಯಮಿಯಾಗುವುದು ಹೇಗೆಂದು ಕೋರ್ಸ್ ತೆಗೆದುಕೊಂಡವರೆಲ್ಲಾ ಉದ್ಯಮಿಯಾಗಿದ್ದರೆ ಭಾರತ ಎಲ್ಲಿರಬೇಕಿತ್ತು ಹೇಳಿ? ವಿಚಾರಗಳನ್ನು ಕಲಿಯಬಹುದು ಆದರೆ ಅದಕ್ಕೆ ಇವರ ಕೋರ್ಸ್ ಆಗಬೇಕೆಂದಿಲ್ಲ. ಅನುಭವವನ್ನು ಅವರು ತಂದುಕೊಡುವುದಿಲ್ಲ. ಇದೇ ಸಮಯ, ಹಣವನ್ನು ನಾವು ಬೇರೆಡೆ ಉಪಯೋಗಿಸಿದರೆ ಎಷ್ಟೋ ಲಾಭವಾದೀತು. ಇಂತಹ ಸ್ಕ್ಯಾಮ್ ಗಳಲ್ಲಿ ಸಿಕ್ಕಿಕೊಳ್ಳಬೇಡಿ ಎನ್ನುವುದು ಸಾರಾಂಶ. ಇಂತವರಿಂದ ನಿಜವಾಗಿಯೂ ಕಲಿಯಲು ಸಿಗುವ ಕಾರ್ಯಕ್ರಮವನ್ನು ಮಾಡಿದರೆ ಜನಕ್ಕೆ ನಂಬಿಕೆಯೇ ಬರುವುದಿಲ್ಲ. ದುಡ್ಡುಕೊಟ್ಟು ಮಂಗವಾಗುವ ಅಭ್ಯಾಸವಾಗಿದೆಯಲ್ಲಾ !

-ಮೇಘನಾ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ