ಒಂದು ಒಳ್ಳೆಯ ನುಡಿ (220) - ಮತ್ತೆ ಮಳೆಯಾಗಿದೆ…

ಒಂದು ಒಳ್ಳೆಯ ನುಡಿ (220) - ಮತ್ತೆ ಮಳೆಯಾಗಿದೆ…

ಮಳೆ ಬಂತೆಂದರೆ ಎಲ್ಲರಿಗೂ ತುಂಬಾ ಖುಷಿ. ಅದು ಕೂಡ ನಮ್ಮೂರಿನಲ್ಲಿ ಈ ವರ್ಷದ ಮೊದಲ ಮಳೆ ಬಂದೇ ಬಿಡ್ತು. ಆದರೆ ಮಳೆಯಲ್ಲಿ ನೆನೆಯಲು ಅಲ್ಲಿ ನಾನಿರಲಿಲ್ಲ ಎನ್ನುವ ಬೇಜಾರು. ಮೊದಲ ಮಳೆಯ ಅನುಭವ ಸ್ವರ್ಗದಂತೆ ಅನಿಸುತ್ತದೆ. ಬಿಸಿಲಿನಿಂದ ಬೆಂದ ಭೂಮಿಗೆ ಮಳೆ ನೀರು ಬಿದ್ದಾಗ, ಒಮ್ಮೆಗೇ ತಂಪಾಗಿ ಮನಸ್ಸಿಗೂ ಒಂತರ ಖುಷಿ ಕೊಡುತ್ತದೆ. ಮತ್ತೆ ಮೊದಲ ಮಳೆ ಬಂದಾಗ ಮಣ್ಣಿನ ಘಮ ಬರುತ್ತದೆ. ಸುತ್ತ-ಮುತ್ತ ಬರಡಾಗಿದ್ದ ಜಾಗದಲ್ಲಿ ಎಳೆಯ ಹುಲ್ಲುಗಳು ಬೆಳೆದದ್ದು ನೋಡುವುದಕ್ಕೆ ಸಂತೋಷ. ಚಿಕ್ಕಂದಿನಿಂದಲೂ ಮಳೆಯಲ್ಲಿ ಆಡುವುದೆಂದರೆ ನನಗೆ ಎಲ್ಲಿಲ್ಲದ ಹುಮ್ಮಸ್ಸು.

ಆದರೆ ಅಮ್ಮ ಬಿಡಬೇಕಲ್ಲ. ನಾನು ಎಷ್ಟೇ ಹಟ ಹಿಡಿದರೂ ನೆನೆಯಲು ಬಿಡುತ್ತಿರಲಿಲ್ಲ. ಮಳೆಗಾಲದಲ್ಲಿ ಶಾಲೆಗೆ ಹೋಗಲು ತುಂಬಾ ಖುಷಿ. ರೈನ್ ಕೋಟ್ ಹಾಕಿಕೊಂಡು ರಸ್ತೆಯಲ್ಲಿ ಮಳೆ ನೀರಿನಲ್ಲಿ ಆಡುತ್ತಾ ಬರುತ್ತಿದ್ದೆವು. ಅದು ಬೇರೆ ನೇರಳೆ ಹಣ್ಣುಗಳನ್ನು (ಕುಂಟಲು ಹಣ್ಣು) ತಿನ್ನುತ್ತಾ ಬರುತ್ತಿದ್ದ ಸಂತೋಷ ವರ್ಣಿಸಲಾಗದು. ಕೆಲವೊಮ್ಮೆ ಬೇಕಂತಲೇ ಛತ್ರಿ ಮಡಚಿ ನೆನೆಯುತ್ತಾ ಬರುತ್ತಿದ್ದೆ. ಮನೆಗೆ ಬಂದಾಗ ಅಮ್ಮನ ಕೈಯಲ್ಲಿ ಸರಿಯಾಗಿ ಬೈಯಿಸಿಕೊಳ್ಳುತ್ತಿದ್ದೆ. ಆದರೂ ನಾನು ಹೇಳುವುದನ್ನು ಕೇಳುವ ಜಾಯಮಾನದವಳೇ ಅಲ್ಲ, ಮರುದಿನ ಮತ್ತೆ ನೆನೆದುಕೊಂಡು ಬರುತ್ತಿದ್ದೆ. ಮಳೆಗಾಲದಲ್ಲಿ ಮರೆಯಲಾಗದ ತುಂಬಾ ನೆನಪುಗಳಿವೆ. ಜೊತೆಗೆ ಪಾಚಿಯಲ್ಲಿ ಜಾರಿಬಿದ್ದ ನೋವು ನೆನಪಿದೆ. ಆ ದಿನಗಳನ್ನು ಮರೆಯೋದಕ್ಕೆ ಸಾಧ್ಯವಿಲ್ಲ.

-ಆಯುಷಿ ನಾಯಕ್

ಚಿತ್ರ ಕೃಪೆ: ಇಂಟರ್ನೆಟ್ ತಾಣ