ಒಂದು ಒಳ್ಳೆಯ ನುಡಿ (222) - ಕಲಾವಿದ
ನಾವು ವೀಕ್ಷಕರಾಗಿ ವೇದಿಕೆಯ ಮುಂದೆ ಕುಳಿತು ಅವರ ಅಭಿನಯವನ್ನು ನೋಡುತ್ತೇವೆ. ಅವರು ನಮ್ಮನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಕೆಲವೊಮ್ಮೆ ಅಳಿಸುತ್ತಾರೆ. ನಮ್ಮ ಭಾವನೆಗಳನ್ನು ಉಕ್ಕಿಸುತ್ತಾರೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಒಬ್ಬ ಕಲಾವಿದ ಮಾತ್ರ ನಮ್ಮ ಭಾವನೆಗಳನ್ನು ಬದಲಾಯಿಸಬಲ್ಲ. ಅವನ ಅಭಿನಯಕ್ಕೆ ತಕ್ಕಂತೆ ನಮ್ಮ ಭಾವನೆಗಳು ಬದಲಾಯುತ್ತವೆ. ತಮ್ಮ ಬದುಕು ಎಷ್ಟೇ ಕಷ್ಟದಲ್ಲಿದ್ದರೂ ಪರವಾಗಿಲ್ಲ. ಆದರೆ ವೀಕ್ಷಕರಿಗೆ ಮನೋರಂಜನೆ ಒಂದು ಚೂರೂ ಕಮ್ಮಿಯಾಗದಂತೆ ಅಭಿನಯಿಸುತ್ತಾರೆ. ಆದರೆ ಕಲಾವಿದನ ಬದುಕು ಅಷ್ಟು ಸುಲಭವಿಲ್ಲ. ನಮ್ಮನ್ನು ನಗಿಸುವ ಮುಖದ ಹಿಂದೆ ಬೆಟ್ಟದಷ್ಟು ನೋವಿರುವುದು ನಮಗೆ ಗೊತ್ತಿಲ್ಲ.
ಹಗಲಲ್ಲಿ ದುಡಿದು ಸಂಪಾದಿಸಿದ್ದು ಸಾಕಾಗದೇ ರಾತ್ರಿ ಪುನಃ ಬಣ್ಣ ಹಚ್ಚಿ ನಮ್ಮನ್ನು ಮನರಂಜಿಸಲು ವೇದಿಕೆಯ ಮೇಲೆ ಬರುತ್ತಾರೆ. ಅಷ್ಟು ದುಡಿದರೂ ಅವರಿಗೆ ನಾವಂದುಕೊಂಡಷ್ಟು ಸಂಬಳ ಸಿಗುವುದಿಲ್ಲ. ಆದರೂ ಹೊಟ್ಟೆ ಪಾಡಿಗಾಗಿ ಬೇರೆ ದಾರಿಯಿಲ್ಲದೆ ಕಲಾವಿದರಾಗಿ ನಟಿಸುತ್ತಾರೆ. ಅವರನ್ನು ಯಕ್ಷಗಾನ, ನಾಟಕಗಳಲ್ಲಿ ನೋಡಿದಾಗ ಅವರಿಗೇನು ಸಮಸ್ಯೆಯೇ ಇಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಅವರು ಜನರ ಮುಂದೆ ತಮ್ಮ ಕಷ್ಟಗಳನ್ನು ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ತಮ್ಮಿಂದಾದಷ್ಟು ಜನರನ್ನು ನಗಿಸುತ್ತಾರೆ. ತಮ್ಮ ನಟನೆಗೆ ಜನರ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾರೆ. ಆದರೆ ನಮಗೆ ಅವರ ನಟನೆ ಇಷ್ಟವಾಗಿದ್ದರೂ ಚಪ್ಪಾಳೆ ತಟ್ಟಲು ಉದಾಸೀನತೆ. ಕಲಾವಿದರು ನಮ್ಮಿಂದ ಏನನ್ನೂ ಬಯಸುವುದಿಲ್ಲ. ಬದಲಿಗೆ ನಮ್ಮ ಚಪ್ಪಾಳೆ ಮತ್ತು ಅವರ ಬಗ್ಗೆ ಹೇಳುವ ಒಳ್ಳೆಯ ಮಾತುಗಳನ್ನು ಕೇಳಲು ನಿರೀಕ್ಷಿಸುತ್ತಾರೆ ಅಷ್ಟೇ.
-ಆಯುಷಿ ನಾಯಕ್
ಚಿತ್ರ ಕೃಪೆ: ಇಂಟರ್ನೆಟ್ ತಾಣ