ಒಂದು ಒಳ್ಳೆಯ ನುಡಿ (224) - ಫಲಿತಾಂಶ

ಒಂದು ಒಳ್ಳೆಯ ನುಡಿ (224) - ಫಲಿತಾಂಶ

ಅದೊಂದು ಶಾಲೆಯಲ್ಲಿ ಹಿಂದಿನ ವರ್ಷ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪದೇ ಪದೇ ಶಾಲೆಗೆ ಕರೆ ತಂದು ಈ ವರ್ಷ ಬೋರ್ಡ್ ಪರೀಕ್ಷೆಯನ್ನು ಬರೆಯುವವರಿಗೆ ಸ್ಪೂರ್ತಿ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದರು. ಹಳೆಯ ವಿದ್ಯಾರ್ಥಿಗಳು ಬಂದು ಒಳ್ಳೆ ಸ್ಪೂರ್ತಿದಾಯಕ ಭಾಷಣಗಳನ್ನು ನೀಡುತ್ತಾ ಇದ್ದರು. ಹಿಂದಿನ ವರ್ಷದಲ್ಲಿ ಸಾಂಸ್ಕೃತಿಕ, ಕ್ರೀಡೆ ಮತ್ತು ಆಡಳಿತದಲ್ಲಿ ಹಲವಾರು ಮಕ್ಕಳು ಅತ್ಯುತ್ತಮವಾಗಿ ಭಾಗವಹಿಸಿ ಆ ಶಾಲೆಯ ಹೆಸರನ್ನೇ ಉತ್ತುಂಗಕ್ಕೆ ಏರಿಸಿದರೂ, ಈ ವಿದ್ಯಾರ್ಥಿಗಳು ಅಷ್ಟೊಂದು ಕೊಡುಗೆಗಳನ್ನು ಆ ಶಾಲೆಗೆ ನೀಡಿದ್ದರೂ, ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದಕ್ಕೂ ಲೆಕ್ಕವಿಲ್ಲ ಎನ್ನುವಂತೆ ನೋಡುತ್ತಿದ್ದರು. ರಾಂಕ್ ವಿದ್ಯಾರ್ಥಿಗಳನ್ನು ದುಡಿಸಿ ಇವರನ್ನು ಮರೆತು ಬಿಟ್ಟರು. ಹಿಂದಿನ ವರ್ಷ ಅತ್ಯುತ್ತಮ ಅಂಕ ಪಡೆದ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಹಾಡಿ ಹೊಗಳಿ ಉತ್ತುಂಗಕ್ಕೇರಿಸಿದರು. ಈ ವರ್ಷ ಹತ್ತನೇ ತರಗತಿಯ ಪರೀಕ್ಷೆ ಬರೆಯುವ ಹೆಚ್ಚಿನವರು ಅಂಕಗಳ ಹಿಂದೆಯೇ ಓಡಿದರು. ಹಿಂದಿನ ವರ್ಷ ಉತ್ತಮ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಯ ಜಾಗದಲ್ಲಿ ಮುಂದಿನ ವರ್ಷ ನಾನಿರುವೆ ಎಂದು ಮುನ್ನುಗ್ಗಿದರು. ಆದರೆ ಈ ವರ್ಷ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮವಾಗಿ ಮಾಡಲೇ ಇಲ್ಲ. ಕಾರಣ ಏನೆಂದರೆ ಅವರೆಲ್ಲರೂ ಫಲಿತಾಂಶದ ಹಿಂದೆಯೇ ಓಡಿದರು ವಿನಃ ಹೆಚ್ಚಿನ ಪ್ರಯತ್ನವನ್ನು ಹಾಕಲೇ ಇಲ್ಲ. ಮುಂದೆ ಹಲವು ವರ್ಷಗಳ ನಂತರ ಆ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಮುಂದೆ ಇದ್ದ ವಿದ್ಯಾರ್ಥಿಗಳು ಪ್ರಖ್ಯಾತರಾದರು. ಆ ವಿದ್ಯಾರ್ಥಿಗಳಿಗೆ ಆ ಪರೀಕ್ಷೆಯಲ್ಲಿ ಉತ್ತಮ ಅಂಕ ಬರದಿದ್ದರೂ ಬದುಕೆಂಬ ಪರೀಕ್ಷೆಯಲ್ಲಿ ಉತ್ತಮ ಅಂಕ ಮತ್ತು ಸ್ಥಾನವನ್ನೂ ಗಳಿಸಿದರು. ಉತ್ತಮವಾದ ಅಂಕಗಳನ್ನು ಗಳಿಸುತ್ತಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರೇ ಕಂಡು ಹುಡುಕಲು ಕಷ್ಟ ಪಟ್ಟರು. 

ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಎಲ್ಲರಿಗೂ ಅಭಿನಂದನೆಗಳು. ನಾವು ಎಂದಿಗೂ ನಮ್ಮ ಕೆಲಸದ ಬಗ್ಗೆ ಯೋಚಿಸಬೇಕೇ ವಿನಹ ಫಲಿತಾಂಶದ ಕುರಿತು ಅಲ್ಲ. ಕೆಲಸ ಹೇಗೆ ಮಾಡುತ್ತೇವೆ, ಎಷ್ಟು ಪರಿಶ್ರಮವನ್ನು ಹಾಕುತ್ತೇವೆ ಅನ್ನೋದು ಮಾತ್ರ ನಮ್ಮದು. ಉಳಿದ ಫಲಿತಾಂಶವೆಲ್ಲ ಪರಮಾತ್ಮನಿಗೆ ಬಿಟ್ಟದ್ದು ಎಂಬ ಮಾತನ್ನು ಶ್ರೀಕೃಷ್ಣ ಭಗವದ್ಗೀತೆಯಲ್ಲೇ ಹೇಳಿದ್ದಾನೆ. ಈ ಮಾತೇ ಯಶಸ್ಸು ಗಳಿಸಲಿಕ್ಕೆ ಇರುವ ಸರಿಯಾದ ಸೂತ್ರ ಎನ್ನುವುದು ನನ್ನ ಅಭಿಪ್ರಾಯ.

-ವೀಕ್ಷಣ್ ಆರ್ ಆಚಾರ್ಯ, ಮರ್ಣೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ