ಒಂದು ಒಳ್ಳೆಯ ನುಡಿ (230) - ವೈದ್ಯರಿಗೆ ನಮನ

ಒಂದು ಒಳ್ಳೆಯ ನುಡಿ (230) - ವೈದ್ಯರಿಗೆ ನಮನ

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ, ಕಷಾಯ, ಎಣ್ಣೆ ಇತ್ಯಾದಿ ತಯಾರಿಸಿ ತೆಗೆದುಕೊಳ್ಳುತ್ತೇವೆ. ಒಮ್ಮೊಮ್ಮೆ ಕಡಿಮೆಯಾಗುತ್ತದೆ. ಒಂದೆರಡು ದಿನಗಳಲ್ಲಿ ಕಡಿಮೆ ಆಗದಿದ್ದರೆ ಮತ್ತೆ ವೈದ್ಯರ ಬಳಿ ಹೋಗುವುದು ವಾಡಿಕೆ, ಹೋಗಲೇಬೇಕು ಸಹ. ಇಂದಿನ ದಿನದಲ್ಲಿ ಅಸೌಖ್ಯವೆಂದು ಮನೆಯಲ್ಲೇ ಕುಳಿತು ಸಿಕ್ಕಸಿಕ್ಕ ಕಷಾಯವನ್ನು ಮಾಡಿ ಕುಡಿಯುವುದು ಸಲ್ಲದು. ಎಲ್ಲಾ ಜೋರಾಗಿ ಅನಂತರ ಡಾಕ್ಟರ್ ಅವರ ಹತ್ತಿರ ಹೋದರೆ ಅವರಾದರೂ ಏನು  ಮಾಡಿಯಾರು? ಪ್ರಾರಂಭದಲ್ಲಿ ಆದರೆ ರೋಗಮೂಲವನ್ನು ಕಂಡು ಹಿಡಿದು ಬೇಕಾದ ಉಪಚಾರ ಮಾಡಬಹುದು ಕಾಯಿಲೆ ವಿಷಯದಲ್ಲಿ ಅಲಕ್ಷ್ಯ ಮಾಡಬಾರದು.

*ವ್ಯಾಧೇಸ್ತತ್ತ್ವಪರಿಜ್ಞಾನಂವೇದನಾಯಾಶ್ಚ ನಿಗ್ರಹಃ*/

*ಏತದ್ವೈದ್ಯಸ್ಯ ವೈದ್ಯತ್ವಂ ನವೈದ್ಯಃ* *ಪ್ರಭುರಾಯುಷಃ//*

ವೈದ್ಯರ ಹತ್ತಿರ ಹೋದಾಗ, ವ್ಯಾಧಿಯ ಸ್ವರೂಪವನ್ನು ಸರಿಯಾಗಿ ನಾವು ಹೇಳಬೇಕು. ಸಮರ್ಪಕ ವೈದ್ಯನು ವ್ಯಾಧಿಯ ಸ್ವರೂಪವನ್ನು ತಿಳಿದು, ಬೇಕಾದ ಮದ್ದು ನೀಡುವನು. ಇವೆರಡನ್ನೂ ಅರಿತು ವ್ಯವಹರಿಸುವವನೇ ನಿಜವಾದ ವೈದ್ಯ. ಆದರೆ ಆಯುಷ್ಯದ ಒಡೆಯ ವೈದ್ಯನಲ್ಲ. ಆಯುಷ್ಯ ನೀಡುವವ ಮೇಲೊಬ್ಬ ಕುಳಿತು ಎಲ್ಲವನ್ನೂ ನೋಡುವವ ಕಣ್ಣಿಗೆ ಕಾಣದ ಶಕ್ತಿ .(ಭಗವಂತ).

ಹುಟ್ಟು -ಸಾವುಗಳ ಬಗ್ಗೆ ನಮಗೇನೂ ಹೇಳಲು ಸಾಧ್ಯವಿಲ್ಲ. ಆ ನಡುವೆ ಇರುವ ದಿನ ನಮ್ಮದು. ಆದಷ್ಟೂ ಉತ್ತಮ ಆಹಾರ, ಒಳ್ಳೆಯ ನಡೆ-ನುಡಿ,ಹವ್ಯಾಸ ಅಭ್ಯಾಸಗಳನ್ನು  ರೂಢಿಸಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸೋಣ. ಪ್ರಯತ್ನ ನಮ್ಮದು ಅಲ್ಲವೇ? ಕೊಡುವುದು ಬಿಡುವುದು ಅವನಿಗೆ ಗೊತ್ತಿದೆ, ಅವರವರ ಕರ್ಮಕ್ಕನುಸಾರವಾಗಿ  ಕೊಟ್ಟಾನು.ನಾವು ಮಾಡುವ ಕರ್ತವ್ಯ ಮಾಡಬೇಕು.ಜಾಗ್ರತೆ ವಹಿಸಬೇಕು.

ತಮ್ಮ ಸೇವೆಯನ್ನು ಜನರ ಪ್ರಾಣರಕ್ಷಣೆಗಾಗಿ ಮುಡಿಪಾಗಿಟ್ಟ, ಪ್ರತ್ಯಕ್ಷ ದೇವರಂತಿರುವ, ಆಪತ್ಕಾಲದ ಜೀವ ರಕ್ಷಕರಾಗಿರುವ, ಹಗಲಿರುಳು ದುಡಿಯುತಲಿರುವ, ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜಕ್ಕೆ ಜೀವರಕ್ಷಣಾ ಕೊಡುಗೆ ನೀಡುತ್ತಿರುವ ವೈದ್ಯ ವೃತ್ತಿಯಲ್ಲಿರುವ ಎಲ್ಲಾ ಬಂಧುಗಳಿಗೂ ತಮ್ಮ ಅವಿಸ್ಮರಣೀಯ ಸೇವೆಗಾಗಿ ಹಾರ್ದಿಕ  ಶುಭಾಶಯಗಳು.

(ಶ್ಲೋಕ; ಸರಳ ಸುಭಾಷಿತ)

-ರತ್ನಾ. ಕೆ.ಭಟ್, ತಲಂಜೇರಿ