ಒಂದು ಒಳ್ಳೆಯ ನುಡಿ - 232
ವ್ಯತ್ಯಾಸ
ಸಣ್ಣ ದೋಣಿಗಳು ಯಾವ ರೀತಿಯ ನೀರಿನಾಳದ ಮೇಲೂ ಚಲಿಸುತ್ತವೆ ; ಆದರೆ ದೊಡ್ಡ ದೊಡ್ಡ ಹಡಗುಗಳು ಆಳವಾದ ನೀರಿನ ಮೇಲೇ ಚಲಿಸ ಬೇಕಾಗುತ್ತವೆ . ಇಲ್ಲದಲ್ಲಿ ಒಡೆದು ಚೂರಾಗುತ್ತವೆ ! ಇದುವೆ ಬಡವ ಮತ್ತು ಶ್ರೀಮಂತನಿಗಿರುವ ವ್ಯತ್ಯಾಸ !
ದೇವಿ
ಎಂತಹ ದುಃಖದಲ್ಲೂ, ಕಷ್ಟದಲ್ಲೂ ಜೀವನದ ಹಾದಿಯಲ್ಲಿ ಕುಗ್ಗದೆ ಜಗ್ಗದೆ ಮುಂದೆ ಸಾಗುತ್ತಿರುವ ಜಾಣ್ಮೆ ಗಂಡನಿಗಿಂತಲೂ ಹೆಂಡತಿಯಲ್ಲಿ ಜಾಸ್ತಿ ಇರುತ್ತದೆ. ಪರರ ದುಃಖವನ್ನು ಕಂಡು ಅವರ ಕಷ್ಟಗಳಿಗೆ ಧ್ವನಿಯಾಗುತ್ತಾ ತನ್ನ ಕಷ್ಟಗಳನ್ನು ಮರೆಯುವ ದೇವಿಯವಳು !
ನುಡಿಗಳು
* ಸುಳ್ಳರೆದುರು ಸತ್ಯ ಮುಚ್ಚಿಡಲು ಸತ್ಯವಂತರು ಕಡಿಮೆ ಮಾತನಾಡುತ್ತಾರೆ ;ಸುಳ್ಳನ್ನು ಸಾಧಿಸಲು ಸುಳ್ಳರು ಜಾಸ್ತಿ ಮಾತನಾಡುತ್ತಾರೆ.
* ಹಸಿವು , ಮನುಷ್ಯನನ್ನು ಒಂದೋ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ! ಇಲ್ಲ ಪಾತಾಳಕ್ಕೆ ತಳ್ಳುತ್ತದೆ !
* ಬದುಕಿನಲ್ಲಿ ನಲಿವನ್ನು ಸೆಳೆಯಿರಿ , ಅದು ನಿಮಲ್ಲಿರುವ ನೋವನ್ನು ಅಳಿಸುತ್ತದೆ.
* ಯಾವುದೇ ಸಂಸ್ಥೆಯಲ್ಲಿ , ಸೇವೆಯ ಹಿರಿತನವುಳ್ಳ ಕೆಲಸಗಾರರ ಜೊತೆಗೆ ವಯಸ್ಸಿನಲ್ಲಿ ಹಿರಿಯನಾದರೂ ; ಕಿರಿಯರಂತೆ ಜೊತೆಗೂಡಿಕೊಂಡು ಕೆಲಸ ಮಾಡಿ . ಯಾಕೆಂದರೆ ? ಸಂಸ್ಥೆಯ ಬೆಳವಣಿಗೆ ದೃಷ್ಠಿಯೊಂದಿಗೆ, ನಿಮ್ಮ ವರ್ಚಸ್ಸು ದಿನಗಳೆದಂತೆ ಬೆಳೆಯುತ್ತದೆ.
* ದ್ವೇಷ ಅಸೂಯೆಗಳ ಗೂಡು ! ನಮ್ಮ ತಾಯಿಯ ನಾಡು ! ಅದಕ್ಕೆಂದು ತೋರುತ್ತದೆ ದಿನಕ್ಕೊಂದು ವೀರಪ್ಪನ್ ಅವತಾರ ನೋಡು.
* ಮೊನ್ನೆ ಮೊನ್ನೆಯವರೆಗೂ ಬೇಡ ಬೇಡವೆಂದರೂ ತುಪ್ಪದಲ್ಲೆ ಅದ್ದಿ ಅದ್ದಿ ದೋಸೆ ತಿನ್ನುತ್ತಲಿದ್ದೆ ! ಇಂದು ಹಾಗಲ್ಲ ? ದೋಸೆಯೂ ಇಲ್ಲ , ತುಪ್ಪ ಮೊದಲೇ ಇಲ್ಲ ! ಕಾರಣ ? ನಮ್ಮ ಮನೆಯ ಧನ , ದನ ಎರಡೂ ಕಾಣೆ.
ಓ ಜನರೆ
ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿರುವುದು ಸಂವಿಧಾನದ ಪ್ರಕಾರ ನಡೆವ ಆಡಳಿತ. ಪ್ರಜೆಗಳು, ಪ್ರಜೆಗಳಿಂದಾಗಿಯೇ ನಡೆವ ಸರಕಾರ. ಜನರೇ ಇಲ್ಲಿ ಅಂತಿಮ ತೀರ್ಪುಗಾರರು. ನಾವದನ್ನು ಅರಿಯಬೇಕು. ಸಂವಿಧಾನದಲ್ಲಿ ವ್ಯಕ್ತಿ ಪೂಜೆ ಸಲ್ಲ. ನಾವು ಆರಿಸಿ ಕಳುಹಿಸಿದವರು ನಮ್ಮ ಸೇವಕರೇ ಹೊರತು ನಮ್ಮನ್ನಾಳು ಪ್ರಭುಗಳಲ್ಲ. ನಾವೆಲ್ಲ ಯಾಕೆ ಆರಿಸಿ ಬಂದವರನ್ನು ಪ್ರಭುಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆಯೆಂಬುವುದು ಇಂದಿಗೂ ಈ ಕ್ಷಣಕ್ಕೂ ಅರ್ಥವಾಗದ್ದು . ಸರಕಾರದ ಆಡಳಿತದಲ್ಲಿರುವ ಅಧಿಕಾರಿ ನೌಕರರು ಸರಕಾರಕ್ಕೆ ನಾವು ಸಲ್ಲಿಸಿದ ತೆರಿಗೆ ಹಣದಲ್ಲಿ ಕೆಲಸಕ್ಕೆ ಸರಿಯಾಗಿ ಸಂಬಳ ಪಡೆಯುವವರು . ನಮ್ಮ ಜನರ ಸೇವಕರವರು. ನಾವು ಅವರ ನಿಯತ್ತಿನ ಕೆಲಸಕ್ಕೆ ಮರ್ಯಾದೆ ಕೊಡೋಣ ; ದರ್ಪಕ್ಕಲ್ಲ. ಜನರೀಗ ಎಚ್ಚರಗೊಳ್ಳುವ ಕಾಲ ಸನ್ನಿಹಿತವಾಗಿದೆ.
ಗುರು ಮಹತ್ವ
ಅತೀ ಕಷ್ಟ ಸುಖದ ಸಂದರ್ಭದಲ್ಲಿ ನಮಗೆ ಕಣ್ಣೀರು ಬರುವುದು ಸಹಜ ;ಆದರೆ ಕಣ್ಣೀರಿನ ರುಚಿ ಒಂದೇ ಆಗಿರುತ್ತದೆ ! ಹಾಗೇ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಚಿತ್ತದಿಂದ ಬಾಳಿ ಬದುಕಬೇಕು. ವ್ಯಕ್ತಿ ಪೂಜೆ ಮಾಡದಿರೋಣ , ಅದು ನಮ್ಮನ್ನು ಒಳ್ಳೆಯ ನಾಗರೀಕರನ್ನಾಗಿಸುವ ಬದಲು ; ಗುಲಾಮರನ್ನಾಗಿಸುತ್ತದೆ !
ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣ. ಅದು ಬದುಕಿನ ಪರಿಪೂರ್ಣತೆ. ನಮ್ಮ ಕುಲ ಗುರುಗಳ, ನಮಗೆ ವಿದ್ಯೆ ಬುದ್ಧಿ ಕೊಟ್ಟು ಈ ಮಟ್ಟಕ್ಕೆ ನಾವು ಬೆಳೆಯಲು ಕಾರಣರಾದ ಎಲ್ಲಾ ಗುರುವರ್ಯರಿಗೂ ನಮೋ ನಮಃ . ಗರುಭ್ಯೋ ನಮಃ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ