ಒಂದು ಒಳ್ಳೆಯ ನುಡಿ - 236

ಒಂದು ಒಳ್ಳೆಯ ನುಡಿ - 236

ಬದುಕು ಎಚ್ಚರಿಸುತ್ತಿರುತ್ತದೆ, ಎಚ್ಚೆತ್ತುಕೊಂಡುಬಿಡಬೇಕು. ಬದುಕಲ್ಲಿ ಏನೇ ಆದರೂ ಎಲ್ಲ ಮರೆತು ಬದುಕು ಬಂದಂತೆ ನಡೆಯುತ್ತಿರುತ್ತೇವೆ. ಎಷ್ಟೇ ಆಳದ ದುಃಖ, ಎಂಥದೇ ಉನ್ನತ ಸುಖಾನುಭವ ಇದ್ದರೂ ಕಾಲದ ಕಾಲಲ್ಲಿ ಸಿಕ್ಕಿ ಸುಟ್ಟು ಬೂದಿಯಾಗುತ್ತಿರುತ್ತವೆ. ನೆನ್ನೆ ಮತ್ತು ನಾಳೆ ಎರಡೂ ಸುಮ್ಮನೆ. ಇಂದು ಈಗ ಮಾತ್ರ ನಿಜ. 

ಮುಸ್ಸಂಜೆ ಹೊತ್ತು ಬೈಕಲ್ಲಿ ಹೊರಟಿದ್ದೆ. ಲೈನ್ ಕ್ರಾಸ್ ಮಾಡಬೇಕಿತ್ತು. ಇಂಡಿಕೇಟರ್ ಹಾಕಿಕೊಂಡು ಮೆಲ್ಲಗೆ ರಸ್ತೆ ದಾಟುತ್ತಿದ್ದೆ, ಅದು ಡಬಲ್ ರೋಡ್. ಮೆಲ್ಲಗೆ ದಾಟುತ್ತಿರುವಾಗ ಇಬ್ಬರು ನಡುವಯಸ್ಸಿನ ಹುಡುಗರು ಯಾವುದೋ ಲಹರಿಯಲ್ಲಿ (ನಶೆಯಯಲ್ಲಿ!) ಬೈಕಲ್ಲಿ ಜೋರಾಗಿ ಬಂದರು. ನಾನು ಜೋರಾಗಿ ಹಾರ್ನ್ ಮಾಡಿದೆ. ಆ ಬೈಕ್ ರೈಡ್ ಮಾಡುತ್ತಿದ್ದ ಹುಡುಗನಿಗೆ ಎಚ್ಚರಿರಲಿಲ್ಲ. ನನ್ನ ಹಾರ್ನ್ ಕೇಳಿ ಅವನ ಹಿಂದಿನ ಹುಡುಗ ಹೇಳಿದಾಗ ಆ ಹುಡುಗನಿಗೆ ಎಚ್ಚರ. ಅಷ್ಟೊತ್ತಿಗಾಗಲೇ ನನ್ನ ಬೈಕ್ ಗೆ ಅವರು ಮುತ್ತಿಡಲು ಬಂದೇ ಬಿಟ್ಟರು. ನಾನು ಆದಷ್ಟು ತಪ್ಪಿಸಿಕೊಂಡೆನಾದರೂ ನನ್ನ ಬೈಕ್ ನ ಹಿಂದಿನ ಗಾಲಿಗೆ ಹೊಡೆದುಕೊಂಡು ನಿಲ್ಲದೇ ನನ್ನನ್ನೇ ಬೈಯುತ್ತಾ ಹೊರಟು ಹೋದರು. 

ನಾನು ಎದ್ದು ನಿಂತು ಸಾವರಿಸಿಕೊಂಡು ಮುಂದೆ ಹೋಗಿ ಗಾಡಿ ನಿಲ್ಲಿಸಿ ಕೂತೆ. ಸುಧಾರಿಸಿಕೊಂಡು ಮನೆಗೆ ಬಂದೆ, ಬಹಳಷ್ಟು ಹೊತ್ತು ಸಮಾಧಾನವೆನಿಸಲಿಲ್ಲ.  ಅವರದಾರದೂ ತಪ್ಪಿಲ್ಲ. ನಾವೇ ಬದುಕು ಶಾಶ್ವತವೆಂಬ ಭ್ರಮೆಯಲ್ಲಿ, ನಾವು ಅಮರರು ಎಂಬ ಹಮ್ಮಿನಲ್ಲಿರುತ್ತೇವೆ. ಬದುಕು ಎಚ್ಚರಿಸುತ್ತಿರುತ್ತದೆ, ನಾವು ಕೇಳಿಸಿಕೊಳ್ಳುತ್ತಿರಬೇಕು.

Please don't mind friends... be aware of each second... because life is unpredictable...

-ವೀರಣ್ಣ ಮಡಿವಾಳರ

ಚಿತ್ರ ಕೃಪೆ: ಇಂಟರ್ನೆಟ್ ತಾಣ