ಒಂದು ಒಳ್ಳೆಯ ನುಡಿ (238) - ಅಂತರಾಷ್ಟ್ರೀಯ ಅಹಿಂಸಾ ದಿನ
‘ಅಹಿಂಸೆ’ ಎಂಬ ಪದದ ಪರಿಕಲ್ಪನೆಯಲ್ಲಿ ನೋವಿನಾಳದ ಎಲ್ಲಾ ಮೂಲಗಳೂ ಅಡಗಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಹಾತ್ಮಾಗಾಂಧೀಜಿಯವರ ಜನ್ಮದಿನ ಅಕ್ಟೋಬರ್ ೨ ನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಬಾಪೂರವರು ಭಾರತ ದೇಶ ಕಂಡ ಅತ್ಯದ್ಭುತ ತತ್ವ ಪ್ರತಿಪಾದಕ, ಸತ್ಯನಿಷ್ಟ, ಪ್ರಾಮಾಣಿಕ, ಚಿಂತನೆಯ ದ್ಯೋತಕ, ಶ್ರೇಷ್ಠ ಮುತ್ಸದ್ಧಿ, ಸ್ವಾಭಿಮಾನಿ, ಪ್ರೇರಕಾಶಕ್ತಿ ಎಲ್ಲಾ ಗುಣಗಳನ್ನು ಹೊಂದಿದ ಮಹಾನ್ ಶಕ್ತಿ. ಹಾಗಾಗಿಯೇ ರಾಷ್ಟ್ರಪಿತನಿಗೆ ಸಂದ ಗೌರವವಿದು.
‘ಅಹಿಂಸಾ ದಿನ’ ಘೋಷಣೆಗೆ ಕಾರಣ ಮಾನವತೆಯ ಮುಖವಾಡ, ಕ್ರೌರ್ಯ, ಹಿಂಸೆ, ದಬ್ಬಾಳಿಕೆ, ರಕ್ತಪಾತ, ನೆತ್ತರ ಸಿಂಚನ, ಗೋಮುಖವ್ಯಾಘ್ರಗಳ ನಡತೆ, ಮನುಷ್ಯತ್ವದ ಕಗ್ಗೊಲೆ, ಅನಾಚಾರ, ಅತ್ಯಾಚಾರಗಳ ಹಿಂಸೆ, ಎಲ್ಲವನ್ನೂ ತೊಡೆದುಹಾಕುವಲ್ಲಿ ಎಚ್ಚರಿಕೆಯ ಕರೆಗಂಟೆಗಾಗಿ ವಿಶ್ವಸಂಸ್ಥೆಯು ಕೈಗೊಂಡ ನಿರ್ಧಾರ.
ಪ್ರೇರಕಾಶಕ್ತಿ ಗಾಂಧಿಯವರ ಜೀವನಶೈಲಿ, ಶಾಂತಿದೂತರು, ಸಂದೇಶ, ಬ್ರಿಟಿಷ್ ಸರಕಾರದ ಆಡಳಿತ ವೈಖರಿಯ ಬಗ್ಗೆ ನಿಷ್ಕ್ರೀಯ ಧೋರಣೆ, ಶಾಂತಿಯಿಂದ ಬಗೆಹರಿಸಬಹುದೆಂಬ ಮನೋಭಾವ, ಮೌನದ ಮೂಲಕ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಪರಿಕಲ್ಪನೆ, ಸ್ವರಾಜ್, ಅಸಹಕಾರ ಚಳುವಳಿ ಪ್ರೇರಣೆಯಾಯಿತು.
ಆತ್ಮಶುದ್ಧಿಯೇ ಅಹಿಂಸೆ, ಲಿಂಗತಾರತಮ್ಯವಿಲ್ಲದೆ, ಹಿಂಸಿಸದೆ ಸಮಾನವಾಗಿ ನೋಡುವುದು. ಸ್ವಚ್ಛತೆ, ಸ್ವಾವಲಂಬಿ ಬದುಕಿನ, ಕಾಯಕದಿನಿಷ್ಠೆ, ಆತ್ಮಾವಲೋಕನ, ಎಲ್ಲಧರ್ಮಗಳ ಮೂಲ ಸತ್ಯ ಎಂದ ಮಹಾನ್ ನೇತಾರನ ಆದರ್ಶಗಳೇ ಅವರ ಜನ್ಮ ದಿನವನ್ನು ‘ವಿಶ್ವ ಅಹಿಂಸಾ ದಿನವಾಗಿ’ ಆಚರಿಸಲು ನಾಂದಿಯಾಯಿತು.
-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ