ಒಂದು ಒಳ್ಳೆಯ ನುಡಿ - 244

ಒಂದು ಒಳ್ಳೆಯ ನುಡಿ - 244

'ಕನ್ನಡವೆಂದರೆ ಬರಿನುಡಿಯಲ್ಲ ಮುತ್ತಿನ ಮಣಿ ಸಾಲು’ ಹಿರಿಯ ಸಾಹಿತಿಗಳ ಈ ಸಾಲುಗಳಲ್ಲಿ ಎಷ್ಟೊಂದು ಅರ್ಥವಿದೆ, ಭಾಷಾಭಿಮಾನವಿದೆ ಅಲ್ಲವೇ? ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿ ಭಾಷೆಯ, ಹೊನ್ನುಡಿಯ, ಚೆಲ್ನುಡಿಯ, ನಲ್ನುಡಿಯ. ಸ್ನೇಹಿತರೇ, ಮಾತಿನಲ್ಲಿ ಹೇಳಿದರೆ ಸಾಲದು, ಕೃತಿಯಲ್ಲೂ ನಾಡು ನುಡಿ  ಅನುಷ್ಠಾನಗೊಳ್ಳುವಲ್ಲಿ ನಮ್ಮೆಲ್ಲರ ಪ್ರಯತ್ನವಿರಬೇಕು. ಅನ್ಯ ಭಾಷೆ ವ್ಯವಹಾರಕ್ಕಿರಲಿ. ತಾಯಿ ಭಾಷೆ ರಕುತದಿ ಎದ್ದು ಕಾಣಲಿ. ನಮ್ಮದೆಂಬ ಅಭಿಮಾನವಿರಲಿ.ನಮ್ಮ ಮನೆಯ ಮುದ್ದು ಕಂದಮ್ಮಗಳಿಗೂ ಕನ್ನಡ ಭಾಷೆಯ ನೆಲೆ-ಬೆಲೆಯನ್ನು ತಿಳಿಸಬೇಕು. ಇದೇ ನಾವೆಲ್ಲರೂ ಕನ್ನಡ ತಾಯಿಗೆ ಸಲ್ಲಿಸುವ ಸೇವೆ.

"ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕನ್ನಡ ನಾಡು". ಹೊಂದಿಕೊಂಡು ಬಾಳುವುದೇ ಬದುಕು, ಜೀವನ. ಎಲ್ಲಾ ಭಾಷಿಗರನ್ನೂ ಒಪ್ಪೋಣ, ಸ್ವೀಕರಿಸೋಣ, ನಮ್ಮ ನಾಡಭಾಷೆ ಕನ್ನಡವನ್ನು ಕಲಿಯುವಂತೆ ಪ್ರೇರೇಪಿಸೋಣ. ನಾವು ಅನ್ಯ ಭಾಷೆಯನ್ನು ಮುತುವರ್ಜಿಯಿಂದ ಕಲಿಯಲು ಪ್ರಯತ್ನಿಸುವಂತೆ, ಕನ್ನಡ ಭಾಷೆ, ನಾಡ ಭಾಷೆಯನ್ನು ಕಲಿಸಲೂ ಶ್ರಮಿಸಬೇಕು.

ಮಾನ್ಯ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿರುವಂತೆ ಕಲಿತರೆ ಯಾವುದೂ ಕಷ್ಟವಲ್ಲ. ಆಗಸದಲ್ಲಿ ಹಾರುವ ಪಕ್ಷಿಗಳಿಗೆ ಯಾರು ಕರೆದು ಉಣಬಡಿಸುವರು ಹೇಳಿ? ಹಾರುತ್ತಾ ಹಾರುತ್ತಾ ತನ್ನ ಆಹಾರವನ್ನು ತಾನೇ ಒಂದು ವ್ರತದಂತೆ ಸಂಪಾದಿಸುವುದು.ಹಾಗೆಯೇ ಶ್ರದ್ಧೆ ಬೇಕು. ನೇಮನಿಷ್ಠೆ ಬೇಕು. ಅದುವೇ ಇಲ್ಲದವ ಸೋಲುವನು.

ಹಕ್ಕಿ ಮುನ್ನರಿಯುವುದತನ್ನ ಪಯಣದ ತೆರನ?/

ಇಕ್ಕುವರದಾರದ ಕರೆದು ತಿರುಪೆಯನು?//

ರೆಕ್ಕೆ ಪೋದಂತಲೆದು,ಸಿಕ್ಕಿದುದನುಣ್ಣುವುದು/

ತಕ್ಕುದಾ ವ್ರತ ನಿನಗೆ-ಮಂಕುತಿಮ್ಮ//

(ಆಕರ:ಮಂಕುತಿಮ್ಮನ ಕಗ್ಗ)

-ರತ್ನಾ ಕೆ. ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ