ಒಂದು ಒಳ್ಳೆಯ ನುಡಿ - 245

ಒಂದು ಒಳ್ಳೆಯ ನುಡಿ - 245

"ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವ*"

ಎಂದೆಂದೂ ಶಾಶ್ವತವಾದ, ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿಗಳು ಬರೆದ ಅದ್ಭುತ ಸಾಲುಗಳಿವು, ಓದುವಾಗಲೇ ಮೈರೋಮಾಂಚನಗೊಳುವುದಲ್ಲವೇ? ಈ ಜಗದ ಬಾಳೆಂಬ ತೋಟದಲ್ಲಿ ನಾವೆಲ್ಲ ಒಂದೇ ತಾಯಿಯ ಮಕ್ಕಳು, ಒಂದೇ ಮಣ್ಣಿನ ಒಕ್ಕಲೆಂಬುದನ್ನು ಮರೆಯಬಾರದು. ಕನ್ನಡದ ಪದಗುಚ್ಛಗಳೇ ಹಾಗೆ, ಸೊಗಸು, ಸುಂದರ, ಮಾಧುರ್ಯ. ಕನ್ನಡಿಗರ ಅಂತ: ಶಕ್ತಿ, ಆತ್ಮಸ್ಫೂರ್ತಿ ಅಮೃತಕ್ಕೆ ಸಮವಂತೆ. ಯಾವ ಊರಲ್ಲೇ ಇರಲಿ ಮನೆಮಾತು, ತಾಯಿ ಭಾಷೆ ಕನ್ನಡವನ್ನು ನೆನಪಿನಲ್ಲಿಡೋಣ. ಕರ್ನಾಟಕ ಎಂಬ ಪದವೇ ಒಂದು ಜನಾಂಗವಿದ್ದಂತೆ. ಜನಾಂಗ ಎಂದಾಗ ದೇಹ, ಆತ್ಮ ಇರುತ್ತದೆಯೆಂಬ ಭಾವನೆ ನಮ್ಮಲ್ಲಿ ಮೂಡಬೇಕು. ಅದಿಲ್ಲದೆ ಇದ್ದಲ್ಲಿ ಕನ್ನಡ ನುಡಿಯ ಅಭಿವೃದ್ಧಿ ಎಲ್ಲಿಯದು? ಕುಂಟುತ್ತಾ ಸಾಗಬಹುದಷ್ಟೆ. ಒಂದಷ್ಟು ಮೆರವಣಿಗೆ, ಘೋಷಣೆ, ಕವಿಗೋಷ್ಠಿ, ಪ್ರಶಸ್ತಿ, ಅಭಿನಂದನೆ ಹಮ್ಮಿಕೊಂಡರೆ ನೂರರಲ್ಲಿ ಹತ್ತು ಶೇಕಡಾ ಮಾತ್ರ ಕನ್ನಡದ ಕೈಂಕರ್ಯವಾಗಬಹುದು. ಉಳಿದ ಕಾರ್ಯ ಏನೂ ಸಾಗದು. ಟೊಂಕ ಕಟ್ಟಿ, ಹಠ, ಛಲದಿಂದ ಹೊರಟರೆ ಮಾತ್ರ ಪ್ರಯೋಜನವಾಗಬಹುದು. ಈ ನಿಟ್ಟಿನಲ್ಲಿ ಕನ್ನಡಿಗರೆಲ್ಲ ಒಂದಾಗಿ ದುಡಿಯಬೇಕು, ದುಡಿಯೋಣ.

ಕನ್ನಡವೇ ಶಕ್ತಿ, ಕನ್ನಡವೇ ಯುಕ್ತಿ, ಕನ್ನಡವೇ ಮುಕ್ತಿ. ಕನ್ನಡ ನಾಡಿಗಾಗಿ, ಕನ್ನಡಮ್ಮನ ಸೇವೆಗಾಗಿ, ಅನವರತ ದುಡಿಯುವುದರಲ್ಲಿ ಅರ್ಥವಿದೆ, ಸಂತಸವಿದೆ, ತೃಪ್ತಿಯಿದೆ. ಡಾ.ಹಾ.ಮಾ.ನಾಯಕರು ಒಂದೆಡೆ ಬರೆದ ಸಾಲುಗಳಲ್ಲಿ 'ಕನ್ನಡದ ಬಗ್ಗೆ ಅಭಿಮಾನವಿರಬೇಕು, ಸುಮ್ಮನೆ ಕನ್ನಡ ಎಂದರೆ ಏನೂ ಆಗದು-ಸಾಗದು, ಸಾಹಿತ್ಯದ ಕೆಲಸವಾಗಬೇಕು, ಬರೆಯಿರಿ, ಓದುಗರ ಸೆಳೆಯಿರಿ, ಪ್ರಾದೇಶಿಕ ಭಾವನೆಗಳನ್ನು, ಸಮಸ್ಯೆಗಳನ್ನು  ಧೈರ್ಯವಾಗಿ ಹೇಳುವ ಮನಸ್ಸು ಮಾಡಿರೆಂದರು' ಕವನಗಳಾಗಲಿ, ಲೇಖನಗಳಾಗಲಿ ಬದುಕಿನ ಶೋಧನೆಯ ಕೆಲಸವನ್ನು ಮಾಡಬೇಕು, ಪವಾಡಗಳನ್ನಲ್ಲ, ಹೇಗಿರಬೇಕು? ಹೇಗಿದ್ದರೆ ಒಳ್ಳೆಯದೆಂಬ ಕಿವಿಮಾತುಗಳನ್ನು ಓದುಗರಿಗೆ ನೀಡಬೇಕು' ಎಂದು ಉಲ್ಲೇಖಿಸಿದ್ದು ಸತ್ಯವಾದ ಸಾಲುಗಳು, ಪ್ರಸ್ತುತ ಸಹ. ಯಾವುದೇ ಭಾಷೆಯಿರಲಿ. ಬರೆಯುವಾಗ ಅಕ್ಷರ ದೋಷವಿಲ್ಲದೆ ಬರೆಯಲು ಕಲಿಯಬೇಕು. ಕಾಗುಣಿತ ದೋಷಗಳು ತಲೆತಗ್ಗಿಸುವಂತೆ ಮಾಡುತ್ತದೆ. ನಾವು ತಲೆಯೆತ್ತುವಂತೆ ನಮ್ಮ ಬರೆಹಗಳನ್ನು ಪ್ರಸ್ತುತಪಡಿಸಬೇಕು. ಅಕ್ಷರ ತಪ್ಪಿಲ್ಲದೆ ಬರೆಯೋಣ ಬರೆಸೋಣ, ಕನ್ನಡದ ಸೇವೆ ಮಾಡೋಣ.

-ರತ್ನಾ ಕೆ. ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ