ಒಂದು ಒಳ್ಳೆಯ ನುಡಿ - 247

ಒಂದು ಒಳ್ಳೆಯ ನುಡಿ - 247

ಕನ್ನಡವೆಂದರೆ ಹೊತ್ತ ಹೆತ್ತಬ್ಬೆಗೆ ಸಮ.ಕನ್ನಡ ತಾಯಿ ದೇವತೆ."ನನ್ನ ಜೀವವನ್ನು ನಿನ್ನಡಿಯ ಸೇವೆಯೊಳ್ ಮುಡಿಪಾಗಿಡುವೆ". ಹಿರಿಯ ಸಾಹಿತಿಗಳ ನುಡಿಯಲ್ಲಿ ಎಷ್ಟೊಂದು ತಿರುಳಿದೆಯಲ್ಲವೇ?

'ಹೆಸರಾಯಿತು ಕರ್ನಾಟಕ,ಉಸಿರಾಗಲಿ ಕನ್ನಡ'ಮಾನ್ಯ ಸಾಹಿತಿ ಚೆನ್ನವೀರಕಣವಿಯವರ ಕವನದ ಸಾಲುಗಳು.ಹೊಸೆದ ಹಾಗೆ ಹುರಿಗೊಳ್ಳುವ ಗುರಿತಾಗುವ ಕನ್ನಡ.ಈ ನೆನಪಿದ್ದರೆ ಸಾಕು.ಕನ್ನಡವೇ ಸತ್ಯ,ಕನ್ನಡವೇ ಸತ್ವ ಸಹ.

ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡವ ಪಂಚಮದಲಿ ಇಂಚರಿಸುವ ಕೋಗಿಲೆ ನುಡಿ ನುಡಿ ಕನ್ನಡವ ದೇವಿ ಸರಸ್ವತಿ ವೀಣೆಯ ನುಡಿಸಿ

ನುಡಿ ನುಡಿ ಕನ್ನಡವ ಹಿರಿಯ ಸಾಹಿತಿವರೇಣ್ಯರಾದ ಟಿ ಎನ್ ಮಹದೇವಯ್ಯನವರ ಈ ಕನ್ನಡಾಭಿಮಾನದ ಸಾಲುಗಳ ಮರೆಯಲು ಸಾಧ್ಯವಿಲ್ಲ. ಬಂಧುಗಳೇ, ಕನ್ನಡ ಶಾಲೆಗಳ,ಕನ್ನಡ ಭಾಷೆಯ ಉಳಿವಿಗಾಗಿ ಒಂದಾಗಿ ದುಡಿಯೋಣ, ಒಂದಾಗಿ ಚಿಂತಿಸೋಣ, ಕಾರ್ಯರೂಪಕ್ಕೆ ತರೋಣ, ಶ್ರಮವಹಿಸೋಣ.

ಕನ್ನಡದ ನುಡಿಗಳೆಂದರೆ ಹೊನ್ನಿಗಿಂತಲೂ ಮಿಗಿಲು ಕನ್ನಡಿಗರ ಪಾಲಿಗೆ. "ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ,ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ, ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ, ಕನ್ನಡವೆನಗಾಯ್ತು ಕಣ್ಣು ಕಿವಿಬಾಯಿ" ಹಿರಿಯ ಸಾಹಿತಿವರೇಣ್ಯರಾದ ಬೆನಗಲ್ ರಾಮರಾವ್ ಅವರ ಈ ಕನ್ನಡ ಭಾಷೆಯ ಮೇಲಿನ ಅಭಿಮಾನ ಅಗಾಧವಾದುದು. ಆದರೆ ನಾವಿಂದು ಎತ್ತ ಸಾಗುತ್ತಿದ್ದೇವೆ ಎಂದರೆ ಆಂಗ್ಲ ಭಾಷೆಯಿಲ್ಲದಿರೆ ಬದುಕೇ ಇಲ್ಲ ಎನ್ನುವಷ್ಟರಮಟ್ಟಿಗೆ. ಈ ವ್ಯಾಮೋಹ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಗಿದೆ. ಅನ್ಯ ಭಾಷೆ ಬೇಕೆಮಗೆ, ವ್ಯವಹಾರಕೆ ಸೀಮಿತವಾಗಿರಲಿ, ಅದನ್ನು ಕಲಿತರೆ ಮಾತ್ರ ಜೀವನ ಎನುವ ಧೋರಣೆ ಬೇಡ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಇಂದು ಯಾವ  ರಾಷ್ಟ್ರಕ್ಕಾದರೂ ಹೋಗಿ ಬದುಕು ನಡೆಸುವುದನ್ನು ಕಾಣುತ್ತೇವೆ. ಮತ್ತೆ ಯಾಕೆ ಈ ವ್ಯಾಮೋಹ? ಎಲ್ಲವೂ ಇತಿ-ಮಿತಿಯೊಳಿರಲಿ. ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಭಾಷೆಗೆ ಒತ್ತು ನೀಡಬೇಕು. ಈ ವಯಸ್ಸಿನ ಕಲಿಕೆ ಜೀವಮಾನವಿಡೀ ಮನುಜನೊಂದಿಗೆ ನಂಟನ್ನು ಬೆಸೆದಿರುತ್ತದೆ.ಆಂಗ್ಲ ಭಾಷೆ ಬೇಕು, ಎಲ್ಲಾ ಭಾಷೆಯ ಪರಿಚಯವಿರಬೇಕು. ಕನ್ನಡ ನಾಡಿನಲ್ಲಿ ಜನಿಸಿ ಕನ್ನಡದ ಬಗ್ಗೆ ಅಸಡ್ಡೆ ಬೇಡ ಅಷ್ಟೆ. ಕನ್ನಡಿಗರಾದ ನಾವೆಲ್ಲರೂ   ನಾಡುನುಡಿಗಾಗಿ ಶ್ರಮಿಸೋಣ.

-ರತ್ನಾ ಕೆ. ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ