ಒಂದು ಒಳ್ಳೆಯ ನುಡಿ - 248

ಒಂದು ಒಳ್ಳೆಯ ನುಡಿ - 248

"ಗಿಡ ಗಿಡದಲಿ ಹಾರಾಡುವ ದುಂಬಿ ನುಡಿ ನುಡಿ ಕನ್ನಡ ನಿನ್ನಯ ಝೇಂಕಾರದಲಿ” ಕನ್ನಡ ಭಾಷೆಯ ಬಗ್ಗೆ ಅಭಿಮಾನದಿಂದ ಬರೆದ ಸಾಲುಗಳಿವು.ಎಷ್ಟೊಂದುಹಿತವಾಗಿದೆಯಲ್ಲವೇ? ಪ್ರಕೃತಿಯಲ್ಲಿಯೂ ನಾಡುನುಡಿಯನ್ನು ಕಂಡವರು ನಮ್ಮ ನಾಡಿನ ಹಿರಿಯ ಸಾಹಿತಿಗಳು.

ಕರ್ನಾಟಕ ಎಂದರೆ ಉದಾತ್ತ ಸಂಸ್ಕೃತಿಯ ನೆಲೆವೀಡು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಡೊಂಬಲ. ನಡೆ ನುಡಿ, ವೇಷಭೂಷಣ, ಊಟೋಪಚಾರಗಳಲ್ಲಿ, ನೇಮನಂಬಿಕೆಗಳಲ್ಲಿ,ವೈವಿಧ್ಯಮತ ಭಾಷೆಗಳಲ್ಲಿ,ಆಚಾರವಿಚಾರಗಳಲ್ಲಿ ಶ್ರೀಮಂತ ಮನೋಭಾವದ ನಾಡಿದು. ಪ್ರಾಕೃತಿಕ ಸಂಪತ್ತು ಹೇರಳವಾಗಿದ್ದು ನೋಡುಗರ ಕಣ್ಣಿಗೆ ಹಬ್ಬ .ಕುಶಲ ಕಲೆಗಳ ತೊಟ್ಟಿಲು. ಇದೆಲ್ಲ ಕನ್ನಡ ನಾಡಿನ ಜನರಾದ ನಮ್ಮ ಭಾಗ್ಯವಲ್ಲವೇ?

"ಆವ ವಿಧದಲಿ ಕನ್ನಡದ ಮಾತೆ ನಿನ್ನಡಿಯ

ಸೇವೆ ಗೆನ್ನೀ ತನುವ ಮುಡಿಪಾಗಿ ಕೊಡಲಿ"

ಹಿರಿಯ ಕವಿವರ್ಯ ಎಂ.ಗೋಪಾಲಕೃಷ್ಣ ಅಡಿಗರ ಈ ಎರಡು ಸಾಲುಗಳಲ್ಲಿ ತಾಯಿ ‌ಸೇವೆಯ ಎಲ್ಲಾ ಋಣವು ಅಡಗಿದೆ.ಏನು ಮಾಡಿದರೂ ಕಡಿಮೆಯೇ. ಕನ್ನಡದ ಮಣ್ಣಿನಲ್ಲಿ ಜನಿಸಿದ ನಾವು ಕನ್ನಡ ತಾಯಿಯ ಋಣವನ್ನು ತೀರಿಸಲು

ಅಳಿಲ ಸೇವೆಯನ್ನಾದರೂ ಸಲ್ಲಿಸಿ, ಧನ್ಯರಾಗೋಣ.

ನಾಡಿ ನಾಡಿ ನಾಡಿಯಲ್ಲಿ ಮಿಡಿಯೆ ಕನ್ನಡ

ಉಸಿರು ಉಸಿರು ಉಸಿರಿನಲ್ಲಿ ಸುಳಿಯೆ ಕನ್ನಡ 

ಅದುವೆ ಅನ್ನ!ಅದುವೆ ಚಿನ್ನ! ಎಲ್ಲ ಕನ್ನಡ

ಇದುವೆ ಚಿನ್ನ!ಇದುವೆ ರನ್ನ! ನಮ್ಮ ಕನ್ನಡ

ಹಿರಿಯ ಸಾಹಿತಿಗಳಾದ ಮಾನ್ಯ ಜಿ. ವರದರಾಜರಾವ್ ಅವರ ಕನ್ನಡದ ಬಗ್ಗೆ ಅಭಿಮಾನ ತುಂಬಿದ ಕವನದ ಸಾಲುಗಳು. ಎಷ್ಟೊಂದು ಸತ್ಯವಿದೆ. 'ಅ ಆ ಇ ಈ  ಓದೋಣ,ಓದುವ ಜೊತೆಗೆ ಬರೆಯೋಣ. ಅಕ್ಷರದಿಂದ ಪದಗಳ ಹೆಣೆದು ವಾಕ್ಯರೂಪವ ರಚಿಸೋಣ ಕನ್ನಡ ವರ್ಣಮಾಲೆಯೇ ಚಂದ,ಪದಗಳು ಇನ್ನೂ ಅಂದ'. ತಾಯಿ ಭಾಷೆಯ ಮರೆಯದಿರೋಣ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ಂಟ್ ತಾಣ