ಒಂದು ಒಳ್ಳೆಯ ನುಡಿ - 249
ಕವಿವರ ಪುರಂದರ ದಾಸರು ಮೆರೆದು ಹಾಡಿ ಹೊಗಳಿದ ಕನ್ನಡವಿದು. ರಾಷ್ಟ್ರಕವಿ ಕುವೆಂಪುರವರ ಕಾವ್ಯ ಕವನಗಳ ಒಂದೊಂದು ಪದಗಳನ್ನು ಬಣ್ಣಿಸಲಾಗದು. "ಕನ್ನಡಕೆ ಹೋರಾಡು ಕನ್ನಡದ ಕಂದ. ಕನ್ನಡವ ಕಾಪಾಡು ನನ್ನ ಆನಂದ. ಜೋಗುಳದ ಹರಕೆಯಿದು ಮರೆಯದಿರು ಚಿನ್ನ, ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ". ಕನ್ನಡಮ್ಮ ತನ್ನ ಕುಡಿಗಳಿಗೆ ನೀಡಿದ ಸಂದೇಶ ಹೊನ್ನುಡಿಗಳಿಗೆ ಸಮ.
ಜಗದಗಲ ಹಬ್ಬಿದ ಶ್ರೀಗಂಧದ ಘಮಲಿನ ಕನ್ನಡವಿದು
ತಾಯಿನುಡಿಯ ಒಂದೊಂದು ಅಕ್ಷರಗಳಲಿ ಕಬ್ಬಿನ ಸಿಹಿಯಿದೆ, ಜೇನಹನಿಯ ಸವಿಯಿದೆ. ಸ್ನೇಹಿತರೇ, ಓದೋಣ -ಬರೆಯೋಣ- ಕಲಿಸೋಣ- ಕಲಿಯೋಣ ನಮ್ಮಕನ್ನಡದ ಭಾಷೆಯನ್ನು. ಜೊತೆಗೆ ದೀಪಗಳ ಹಬ್ಬ ದೀಪಾವಳಿಯನ್ನೂ ಸಂಭ್ರಮ ಸಡಗರದಿಂದ ಮನೆಮಂದಿಯೆಲ್ಲ ಒಟ್ಟಾಗಿ ಆಚರಿಸೋಣ.
***
ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಮನೆಮನೆಯ, ಮನಮನದ ಸುಂದರ ಪುಷ್ಪಗಳೇ ಮಕ್ಕಳು. ಭಗವಂತನ ತೋಟದ ವರಪ್ರಸಾದದ ನಲಿವ ಕುಸುಮಗಳು. ನಮ್ಮ ಮುದ್ದು ಕಂದಮ್ಮಗಳನ್ನು ತಿದ್ದಿತೀಡಿ, ಗುಣವಂತರನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಒಂದನ್ನು ಪಡೆಯಲು ಇನ್ನೊಂದನ್ನು ಸ್ವಲ್ಪ ತ್ಯಾಗ ಮಾಡಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಂಡು ಇಂದಿನಿಂದಲೇ ತಳಪಾಯ ಗಟ್ಟಿಗೊಳಿಸೋಣ.
ದೀಪದಿಂದ ದೀಪ ಹಚ್ಚೋಣ
ಪಾಪಗಳ ಸಂತೆ ಕಳೆಯೋಣ
ತಾಪಗಳ ಸುಟ್ಟುರುಹೋಣ
ಸಂತಸದ ಹೊನಲ ಹರಿಸೋಣ
ಬೆಳಕಿನ ಹಬ್ಬವನ್ನು ಪಟಾಕಿಗಳ ಸದ್ದಿನೊಂದಿಗೆ ಆಚರಿಸಿ ಖುಷಿ ಪಡುವುದು ನಿಜ. ಆದರೆ ಇತಿಮಿತಿಯಿರಲಿ. ಜೀವಕ್ಕೆ ಅಪಾಯವಾಗದಂತಿರಲಿ. ಪರಿಸರ ಸ್ನೇಹಿ ಮಣ್ಣಿನ ಹಣತೆಗಳನ್ನು ಬಳಸಿದರೆ ಅಂದಕ್ಕೆ ಅಂದ, ಬೆಳಕಿಗೆ ಬೆಳಕು, ಅಲಂಕಾರವೂ ಚಂದ. ರಂಗವಲ್ಲಿಯ ಚಿತ್ತಾರದೆಡೆಯಲ್ಲಿ ಪುಟ್ಟ ಹಣತೆಗಳ ಬೆಳಕು ಮನಸ್ಸನ್ನು ಸೆಳೆಯುತ್ತದೆ.
"ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದೆವೆನ್ನಿ"
ಮಾನ್ಯ ಜೆ.ವಿ.ಅಯ್ಯರ್ ಅವರ ಈ ಸಾಲುಗಳು ಎಷ್ಟೊಂದು ಅದ್ಭುತವಲ್ಲವೇ? ಕನ್ನಡದ ಮಕ್ಕಳ ಸಂಕುಲವೇ ಒಂದಾಗಿ, ಏಕ ಮನಸ್ಸಿನಿಂದ ನಾಡುನುಡಿಗಾಗಿ ಶ್ರಮಿಸಿದರೆ, ಬೇರಾವುದೇ ದುಷ್ಟಶಕ್ತಿಗಳಿಗೆ ಆಸ್ಪದವಿಲ್ಲ. ಮಣ್ಣು, ಜಲ, ಗಾಳಿ ಪರಿಸರ ನಿರ್ಮಲವಾಗಿರುವಂತೆ ಕನ್ನಡನಾಡಿನಲ್ಲಿ ಜನಿಸಿದ ಪ್ರತಿಮನೆಯ ಮಗು ಸಹ ಮನಸ್ಸು ಮಾಡುವಂತೆ ಹಿರಿಯರು, ಹೆತ್ತವರು ಕಾಳಜಿವಹಿಸಬೇಕು.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ