ಒಂದು ಒಳ್ಳೆಯ ನುಡಿ - 25

ಒಂದು ಒಳ್ಳೆಯ ನುಡಿ - 25

ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ? ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಬದುಕು ಗಟ್ಟಿಯಾಗಿ ಇರುವಂತೆ ಪ್ರಯತ್ನಿಸೋಣ.

***

ಮನುಷ್ಯನ ಹತ್ತಿರ ಎರಡು ಪ್ರಬಲವಾದ ಆಯುಧಗಳಿವೆ. ಒಂದು--ತಾಳ್ಮೆ ,ಮತ್ತೊಂದು - ಮೌನ.

ತಾಳ್ಮೆ ನಮ್ಮನ್ನು ಮಾನಸಿಕವಾಗಿ ಸಿದ್ಧಗೊಳಿಸಿ ಗಟ್ಟಿಯಾಗಿ, ದೃಢವಾಗಿ ಬೆಳೆಸುತ್ತದೆ, ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಸಹಕಾರಿಯಾಗುತ್ತದೆ. ಮೌನ ಒಂದು ಆಭರಣವೇ ಸರಿ. ಎಷ್ಟೋ ಕಲಹಗಳನ್ನು ದೂರ ಮಾಡಲು ಮೌನ ಒಳ್ಳೆಯದು. ಭಾವನೆಗಳನ್ನು ಗಟ್ಟಿಗೊಳಿಸಿ,ಭಾವನಾತ್ಮಕವಾಗಿಯೇ ನಮ್ಮ ಏಳಿಗೆಗೆ ಕಾರಣವಾಗುತ್ತದೆ

***

ಶಿಷ್ಯರ ಹಣವನ್ನು ಅಪಹರಿಸುವ ಗುರುಗಳು ಈ ಲೋಕದಲ್ಲಿ ಬಹಳ ಜನರಿದ್ದಾರೆ, ಶಿಷ್ಯರ ಮನಸ್ಸನ್ನು ಅಪಹರಿಸುವ ಗುರುಗಳು ತುಂಬಾ ವಿರಳ.

ತಮ್ಮ ವಿದ್ಯಾ ನೈಪುಣ್ಯತೆಯಿಂದ, ಬೋಧನೆ ಮಾಡುವ ಅಧ್ಯಾಪಕ ವೃಂದ ಇಂದು ಬೇಕಾಗಿದೆ. ಮಕ್ಕಳ ಹೃದಯವನ್ನು ಗೆಲ್ಲುವ ಶಿಕ್ಷಕರ ಅವಶ್ಯಕತೆಯಿದೆ.

ಚಿತ್+ತಾಪ+ಹಾರಕಾಃ ಎಂದು ಪದ ವಿಂಗಡಿಸಿದರೆ, ಬುದ್ಧಿಯಲ್ಲಿ ಉಂಟಾಗುವ ಸಂಶಯ ನಿವಾರಕ, ತಾಪವನ್ನು ಹೋಗಲಾಡಿಸುವವ (ಸಂಶಯ ಎಂಬ ತಾಪ) ಅಂತ ಗುರುಗಳು ಬೇಕು. ಬುದ್ಧಿಯ ತಾಪವನ್ನು ನಿವಾರಿಸಿ, ಮನಸ್ಸನ್ನು ತಮ್ಮ ಒಳ್ಳೆಯ ಗುಣಗಳಿಂದ ಆಕರ್ಷಿಸುವ ಗುರುಗಳನ್ನು ಪಡೆದವರು ಧನ್ಯರೇ ಸರಿ.

***

-ರತ್ನಾ ಭಟ್ ತಲಂಜೇರಿ