ಒಂದು ಒಳ್ಳೆಯ ನುಡಿ - 250

ಒಂದು ಒಳ್ಳೆಯ ನುಡಿ - 250

ದೀಪಗಳ ಹಬ್ಬದ ಸಂಭ್ರಮ ಮುಗಿಯಿತು. ಆದರೆ ಆಚರಣೆಯ ಸಂಭ್ರಮದ ನೆನಪುಗಳು ಸದಾ ಹಸಿರು. ಪಟಾಕಿಗಳ ಸದ್ದು ಬಹಳಷ್ಟು ದಿನ ಕಿವಿಗಳಲಿ ರಿಂಗಣಿಸುವುದು ಸಹಜ. ನೆನಪುಗಳ ಸರಮಾಲೆ ನಮ್ಮೊಂದಿಗಿದ್ದು ಆಚರಣೆಯ ಅರ್ಥ ಕೆಡದಂತೆ ನೋಡಿಕೊಳ್ಳೋಣ. ಎಲ್ಲೆಲ್ಲೂ ಹೊಸಬೆಳಕು ಪಸರಿಸಲಿ, ಎಲ್ಲರಿಗೂ ಒಳ್ಳೆಯದೇ ಆಗಲಿ ಎನ್ನುವ ಆಶಯದಲ್ಲಿರೋಣ. 

"ಕೋಗಿಲೆಯ ಇಂಪಿನಲಿ ಮಾವಿನೆಳೆ ತಂಪಿನಲಿ

ಕೂಗುತಲಿ ಹೇಳುವೆನು* *ಕನ್ನಡದ ಹಿರಿಮೆ

ಕಾಗುಣಿತ ಓದುತಲಿ* *ಬರೆಯುತಲಿ ಕಲಿಯುವೆನು

ಕೋಮಲದ ಭಾಷೆಯಿದು ಬರೆಯುವೆನು ಕಲಿಯುವೆನು" ಸಂಕಲ್ಪ ನಮ್ಮಲ್ಲಿರಲಿ.

 

"ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ

ಒಲವೆತ್ತಿ ತೋರುವಾ ದೀಪ!ಹಚ್ಚೇವು"

ಡಾ.ಡಿ.ಎಸ್ ಕರ್ಕಿಯವರ ಈ ಸಾಹಿತ್ಯದ ಸಾಲುಗಳೇ ಅಂದ.

ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ, ದೀಪದ ಬೆಳಕಂತೆ ಪ್ರಜ್ವಲಿಸಲಿ.

***

"ಎನಿತು ಇನಿದು ಈ ಕನ್ನಡ ನುಡಿಯು

ಮನವನು ತಣಿಸುವ ಮೋಹನ ಸುಧೆಯು"

ಸಾಹಿತಿವರೇಣ್ಯರಾದ ಬೆಟಗೇರಿ ಕೃಷ್ಣಶರ್ಮ (ಆನಂದ ಕಂದ) ರ ಕನ್ನಡದ ಭಾಷಾ ಪ್ರೇಮವನ್ನು ಹೊಗಳಲು ನಾಲಿಗೆ ಸಾಲದು. ಹಿರಿಯ ಕವಿಗಳ ಪದಸಂಪತ್ತು ಅಳತೆಗೂ ನಿಲುಕದು. ತಾಯಿನುಡಿಯ ಬಗ್ಗೆ ಅಪಾರ ಅಭಿಮಾನವಿರುವ ಕವನದ ಸಾಲುಗಳನ್ನು ಓದುತ್ತಾ ಹೋದಂತೆ ಕನ್ನಡ ಭಾಷೆಯ ಜಾಗೃತಿಯೊಂದಿಗೆ ಮೈನವಿರೇಳುವುದು. ಅಷ್ಟೂ ಚಮತ್ಕಾರವಡಗಿದೆ ಪದಗಳಲಿ. ಶಬ್ದಗಳ ಪೋಣಿಸುವಿಕೆಯ ಶೈಲಿ ಸಾಹಿತಿಯ ಬೆರಳಲಡಗಿದೆ. ಯಾವುದೇ ಒಂದು ವಿಚಾರವನ್ನು ಕಾವ್ಯ, ಕವನ, ಬರವಣಿಗೆ ಮೂಲಕ ಜನಸಾಮಾನ್ಯರವರೆಗೆ ತಲುಪಿಸುವ ಕಾರ್ಯವನ್ನು ಕನ್ನಡ ಭಾಷೆಯಲ್ಲಿ ಹಲವಾರು ಕವಿಸಾಹಿತಿಗಳು ಮಾಡಿದ್ದಾರೆ. ಇದು ನಮ್ಮ ಕರ್ನಾಟಕಕ್ಕೊಂದು ಹೆಮ್ಮೆ. "ಕವಿಗಳೆಂದರೆ ನಾಡಿನ ಹೊನ್ನಿನ ಗಣಿಗಳಂತೆ, ತಮ್ಮ ಸಾಹಿತ್ಯ ಸೇವೆಯ ಮೂಲಕ ಬಂಗಾರವಾಗಿಸುವ ಕಲೆ ತಿಳಿದವರು" ಮಾನ್ಯ ದಾಶರಥಿ ದೀಕ್ಷಿತ್ ರವರು" ಹಾಡಿ ಹೊಗಳಿದರು.

"ಪಿರಿದರ್ಥವನ್ನಿಲ್ಲದ ಕಿರಿದರೊಳೆ

ಯುವ ಚೆಲುವಿನ ನುಡಿಕನ್ನಡವು

ಇನಿದನಿಯಿಂದಲ್ಲಿ ಬರೆಯುವ ಗುರುನುಡಿ

ಮುತ್ತಿನಹಾರವು ಕನ್ನಡವು".

ಸಾಹಿತಿ "ಇಟಗಿ ರಾಘವೇಂದ್ರರು" ಕನ್ನಡ ಪದಗಳನು ಅಮೂಲ್ಯವಾದ ಮುತ್ತಿನ ಮಣಿಗಳಿಗೆ ಹೋಲಿಸಿದರು. ಹಿರಿಯ ಸಾಹಿತಿಗಳ ನೆರಳಿನಡಿಯಲಿರುವ ನಾವು ಸಾಧ್ಯವಿದ್ದ ಹಾಗೆ ಕನ್ನಡಮ್ಮನ ಸೇವೆ ಮಾಡೋಣ.

(ಆಕರ: ಹಿರಿಯ ಸಾಹಿತಿಗಳ ನುಡಿಮುತ್ತುಗಳ ಸಂಗ್ರಹ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ