ಒಂದು ಒಳ್ಳೆಯ ನುಡಿ - 251
"ಕವಿತೆ ಬರೆದೆವೆಲ್ಲ ತಾಯೆ
ಸವಿ ಮಾತಿನಲಿ ನೀನು ಕಾಯೆ
ನಿನ್ನ ನುಡಿಯೇ ಚೇತನ
ನನ್ನ ನಡೆಯೆ ಅರ್ಪಣ"
ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಅನ್ಯ ಭಾಷೆಯ ವ್ಯಾಮೋಹ, ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಉದ್ಯೋಗವೆಂಬ ಭ್ರಮಾಲೋಕದೊಳಗೆ ಹೊಕ್ಕಾಗಿದೆ. ಹೊರಬರಲಾಗದೆ ಚಡಪಡಿಕೆಯುಂಟಾಗಿದೆ. ನನ್ನ ಗೊತ್ತಿದ್ದವರ ಮಕ್ಕಳಿಬ್ಬರನ್ನು ಆಂಗ್ಲಮಾಧ್ಯಮ ಶಾಲೆಗೆ ದಾಖಲಿಸಿದರು. ಈಗ ಯಾಕಾದರೂ ಸೇರಿಸಿದೆವೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಮಕ್ಕಳಿಗೆ ತಲೆಗೆ ಹೇಳಿದ ವಿದ್ಯೆ ಹತ್ತುವುದಿಲ್ಲ. ಕಡೆಗೆ ಉಪಾಯವಿಲ್ಲದೆ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದರು. ಈಗ ಮಕ್ಕಳು ಲವಲವಿಕೆಯಿಂದ ಕಲಿಯುತ್ತಿದ್ದಾರೆ. ನಮ್ಮ ಜೇಬು, ಮಕ್ಕಳ ಸಾಮರ್ಥ್ಯ ಎರಡೂ ನೋಡದೆ ಹೋದರೆ ಹೀಗೆಯೇ ಆಗುವುದಲ್ಲವೇ? ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಪುನರಾವರ್ತನೆ ಅಭ್ಯಾಸಗಳನ್ನು ಮನೆಯಲ್ಲಿ ಮಾಡಿಸಿದರೆ ಖಂಡಿತಾ ಕಲಿಯಬಹುದು. ಕೀಳರಿಮೆ ಬೇಡ. ಇತರರ ಮಾತಿಗೆ ಕಿವಿಯಾನಿಸದೆ, ಗತ್ತು ದೌಲತ್ತು ಎರಡನ್ನೂ ಬದಿಗೊತ್ತಿ, ನಮ್ಮ ಮಕ್ಕಳ ಸಾಮರ್ಥ್ಯ ನೋಡಿ ಮಾಧ್ಯಮ ನಿರ್ಧರಿಸಿದರೆ ಕಷ್ಟವಿಲ್ಲ. ತಾಯಿ ಭಾಷೆ ಪ್ರಾಥಮಿಕದಲ್ಲಾದರೂ ಇರಲಿ,
ಅನಂತರ ಸ್ವಸಾಮರ್ಥ್ಯದಿಂದ ಮಗು ಕಲಿಯಬಹುದಲ್ಲವೇ? ಇಲ್ಲಿ ಸಮಸ್ಯೆ ಹೇಳಿಕೊಡಲು ಹೆತ್ತವರಿಗೆ ಪುರುಸೊತ್ತಿಲ್ಲ. ಇಬ್ಬರೂ ದುಡಿಯಬೇಕಾದ ಅನಿವಾರ್ಯತೆ. ಶಾಲಾ ಕೆಲಸಗಳನ್ನು ಬಿಡುವಿನ ದಿನಗಳಲ್ಲಿ ಮಾಡಿಸಬಹುದು. ಆಗ ತಿರುಗಾಡುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ತಿಂಗಳಿಗೊಮ್ಮೆ ಮಕ್ಕಳ ಜೊತೆಗೂಡಿ ಹೋಗಬೇಕು. ಆಗ ಅವರಿಗೂ ಸಂತೋಷವಾಗುತ್ತದೆ. ನಮ್ಮ ಮಕ್ಕಳ ಅಭಿವೃದ್ಧಿಗಾಗಿ ನಾವೇ ಮನಸ್ಸು ಮಾಡಬೇಕು, ಕೆಲವೊಂದು ತ್ಯಾಗ, ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯತೆ. ಒಟ್ಟಿನಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅಸಡ್ಡೆ ಬೇಡ. ಅನ್ಯ ಭಾಷೆ ಒಪ್ಪುತ ಕನ್ನಡ ನಮ್ಮ ಭಾಷೆಯ ಅಪ್ಪೋಣ. ಕನ್ನಡ ಭಾಷೆಯ ಬೇರುಗಳಲ್ಲಿ ಗಟ್ಟಿತನವಿದೆ, ಬಿಳಲುಗಳಲ್ಲಿ ಆಸಕ್ತಿಯಿರಲಿ, ಆದರೆ ಬೇರಿನ ಮೂಲವನ್ನು ಮರೆಯದಿರೋಣ.
(ಕವನ ಸಂಗ್ರಹ: ಹಿರಿಯ ಸಾಹಿತಿಗಳ ನುಡಿಮುತ್ತು)
-ರತ್ನಾ ಕೆ ಭಟ್ , ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ