ಒಂದು ಒಳ್ಳೆಯ ನುಡಿ - 259
“ವಿದ್ಯೆ ಎಂದರೆ ಉರು ಹೊಡೆಯುವಿಕೆಯಲ್ಲ. ಮಾಹಿತಿಯನ್ನು ತುಂಬಿಸುವುದಲ್ಲ. ಅದರಿಂದ ಜೀವನದ ಇತಿ-ಮಿತಿಗಳ ಅರಿವು, ಶೀಲನಿರ್ಮಿತಿಯಾಗಬೇಕು. ಶ್ರದ್ಧೆಯಿದ್ದರೆ ಯಾವುದು ಬೇಕೋ ಅದು ದೊರೆಯುವುದು. ಶಾಂತಿ ಮತ್ತು ನಿರ್ಮಲ ಜೀವನಕ್ಕಾಗಿ ಸ್ತುತಿ ನಿಂದೆಗಳನ್ನು ಸಹಿಸಿಕೊಳ್ಳಿ. ಸ್ವಾರ್ಥರಹಿತ ಬದುಕನ್ನು ಬಯಸಿ. ವಿನಯ, ವಿಧೇಯತೆಯೆಂಬ ಹೊನ್ನ ಮೌಲ್ಯ ತನುಮನದಲ್ಲಿರಲಿ, ಬೀಗದೆ ಬಾಗುವುದನ್ನು ಕಲಿಯಿರಿ, ಕರ್ತವ್ಯ ಪಾಲಿಸಲೇ ಬೇಕು, ಪರಿಸ್ಥಿತಿಗೆ ಬೆನ್ನು ಹಾಕದಿರಿ' ಎಂದು ಕರೆಯಿತ್ತ ಮಹಾಸಂತ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮ ದಿನವಿಂದು. ಕಠಿಣವಾದ ಆಧ್ಯಾತ್ಮಿಕ ಸಾಧನೆ ಮಾಡಿ ಯಶಸ್ವಿಯಾದ ಮಹನೀಯರು.
ಜಗನ್ಮಾತೆ ಕಾಳಿಯ ಆರಾಧಕರಾಗಿ ಕಠಿಣ ಶ್ರದ್ಧಾಭಕ್ತಿಯಿಂದ ದೇವಿಯನ್ನು ಸಾಕ್ಷಾತ್ಕರಿಸಿಕೊಂಡವರು. ಭಾರತ ದೇಶದ ಸಂಸ್ಕೃತಿ, ಸಂಪ್ರದಾಯದ ಮೇಲೆ ಅಪಾರ ನಂಬಿಕೆ, ನಿರ್ವಿಕಲ್ಪ ಸಮಾಧಿ, ವಿದ್ಯಾ ಅವಿದ್ಯಾಮಾಯೆಗಳನ್ನು ಸಿದ್ಧಿಸಿಕೊಂಡವರು. ಭಗವಂತನೊಬ್ಬನೇ, ನೋಡುವ,ಹೇಳುವ ಬಗೆ ಬೇರೆ ಬೇರೆ ಅಷ್ಟೆ. ಮಾನವನಲ್ಲಿ ಅಡಕವಾಗಿರುವ ದೈವತ್ವವನ್ನು ಗುರುತಿಸುವ ಕೆಲಸವಾಗಬೇಕು, ಅದಕ್ಕೆ ಕಠಿಣ ತಪಸ್ಸು, ಯೋಗ ಭಾಗ್ಯ ಬೇಕು. ಅಂತರ್ಮುಖಿ ಸ್ವಭಾವದ ಸಂತರು ರಾಮಾಯಣ, ಮಹಾಭಾರತ, ದೇವದೇವಿಯರ ಸ್ತೋತ್ರಗಳನ್ನು ಕಲಿತು ಹಾಡುತ್ತಿದ್ದರು. ಅನೇಕ ಶಿಷ್ಯರನ್ನು ಹೊಂದಿದವರು. ಎಲ್ಲಿ ಜೀವಿ ಇರುವನೋ ಅಲ್ಲಿ ಶಿವನಿದ್ದಾನೆ ಎಂದು ಸಾರಿದ ಈ ಮಹಾನ್ ಸಂತರನ್ನು ನೆನೆಯೋಣವೇ ಈ ದಿನ?
(ಸಂಗ್ರಹ : ಸಂಸ್ಕಾರ ಸಂಸ್ಕೃತಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ