ಒಂದು ಒಳ್ಳೆಯ ನುಡಿ - 262

ಒಂದು ಒಳ್ಳೆಯ ನುಡಿ - 262

‘ಬೆಳೆಯುವ ಸಿರಿ ಮೊಳಕೆಯಲ್ಲಿ’  ಎಂಬ ನಾಣ್ನುಡಿಯಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಗಳನ್ನು ನೀಡಿದಲ್ಲಿ, ನೈತಿಕಮೌಲ್ಯಗಳೊಂದಿಗೆ  ಬೆಳೆಯಬಹುದು. ತಪ್ಪು-ಒಪ್ಪುಗಳನ್ನು ನಯವಾಗಿ ತಿದ್ದಿ, ಬುದ್ಧಿವಾದ ಹೇಳಬೇಕು. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಲು ಬಿಡಬಾರದು. ವಿದ್ಯೆ ಕಲಿಸುವ ಗುರುಗಳನ್ನು ತಾತ್ಸಾರ ಮಾಡದಂತೆ ಎಚ್ಚರಿಕೆ ವಹಿಸಬೇಕು. ಸ್ವತಃ ಪೋಷಕರು ಮಕ್ಕಳೆದುರು ಗುರುಗಳನ್ನು ಹೀಗಳೆಯಬಾರದು. ಕೆಲವು ಮಕ್ಕಳಿಗೆ ಕೈಲಾಗದ ವೃದ್ಧರೆಂದರೆ ಅಸಹ್ಯ, ಮೂಕಪ್ರಾಣಿಗಳಿಗೆ ಕೀಟಲೆ ಮಾಡುವುದು ಇದೆ. ಇದನ್ನೆಲ್ಲ ಗಮನಿಸಿ ಒಳ್ಳೆಯ ಮೌಲ್ಯವನ್ನು ತಿಳಿಸಬೇಕು. ಹಿರಿಯರೆದುರು ಕಾಲಮೇಲೆ ಕಾಲುಹಾಕಿ ಕುಳಿತುಕೊಳ್ಳುವುದು ಸಲ್ಲದು. ಒಂದೇ ಕೈಯೆತ್ತಿ ನಮಸ್ಕರಿಸಬಾರದು ಎನುವುದನ್ನು ಹೇಳಬೇಕು. ಹಸಿವು ಎಂದರೆ 'ಅಗ್ನಿ'. ಅಗ್ನಿದೇವ ಎಂದರೆ ಏನೆಂದು ಹೇಳಬೇಕು. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವವರ ಬಗ್ಗೆ ತಿಳಿಸಬೇಕು. ಹೆತ್ತವರ ಬಗ್ಗೆ ಉಡಾಫೆ ಸಲ್ಲದು. ತಿನ್ನುವ ಆಹಾರ ಚೆಲ್ಲದಂತೆ, ತನುಮನ ಸ್ವಚ್ಛವಾಗಿಡುವಂತೆ, ಭಗವಂತನ ಸ್ಮರಣೆ, ಜೀವನ ಪಾಠ, ಶಿಸ್ತಿನ ಅಭ್ಯಾಸಗಳನ್ನು ಕಲಿಸಬೇಕು. ಸಂಸ್ಕಾರವಂತ ಮಗುವನ್ನು ಪೋಷಿಸಿ ಸಮಾಜಕ್ಕೆ ನೀಡುವುದು ಪೋಷಕರ, ಶಿಕ್ಷಕರ, ನೆರೆಹೊರೆಯವರ ಕರ್ತವ್ಯ. ಮಕ್ಕಳು ಅನುಕರಣೆ ಮಾಡುವುದು ದೊಡ್ಡವರಿಗೆ ತಿಳಿದ ವಿಷಯ. ಜಾಗ್ರತೆ ವಹಿಸಬೇಕು. ಉತ್ತಮ ಗುಣಗಳನ್ನು ಮಕ್ಕಳ ಮನಸ್ಸಿಗೆ ತುಂಬುವ ಕೆಲಸ ಮಾಡಬೇಕು. 'ಮಕ್ಕಳೇ ಮಾಣಿಕ್ಯ, ಮಕ್ಕಳೇ ಭಗವಂತ, ಮಕ್ಕಳೇ ಸಂಪತ್ತು ಸಕಲವು' ಹೌದು. ಹಾಗೆಂದು ತಿದ್ದುವ ವಯಸ್ಸಿನಲ್ಲಿ ತಿದ್ದಿ, ಬುದ್ಧಿ ಹೇಳಬೇಕಲ್ಲವೇ? ಇಲ್ಲದಿದ್ದರೆ ಬೆಳೆದು ದೊಡ್ಡವರಾದ ಮೇಲೆ ಬಗ್ಗಿಸಲು ಸಾಧ್ಯವೇ? ಬೀಗದೆ ಬಾಗುವುದನ್ನು ನಯವಾಗಿ ಹೇಳಿಕೊಡಬಹುದು. ಉತ್ತಮ ಸಂಸ್ಕಾರಗಳನ್ನು ನೀಡುವುದು ಹಿರಿಯರ ಕೆಲಸ. ತಪ್ಪು ಮಾಡಿದಾಗ ಮೃದುವಾಗಿ ತಿಳಿಸಬೇಕು. ಇಲ್ಲದಿದ್ದರೆ ಆ ತಪ್ಪುಗಳೇ ಮುಂದೆ ಸಮಾಜಕಂಟಕ ಕಾರ್ಯಕ್ಕೆ ನಾಂದಿಯಾಗಬಹುದು. ಅನ್ಯರ ಬೇನೆ ಬೇಸರಿಕೆಯ ಅರಿವು ಏನೆಂದು ತಿಳಿಸಬೇಕು .ಪ್ರತಿ ಮನೆಯ ಮಕ್ಕಳನ್ನು ಮನೆಯ ಪ್ರತಿಯೋರ್ವ ಸದಸ್ಯನೂ ಚೆನ್ನಾಗಿ, ಗುಣವಂತನಾಗಿ, ನೀತಿವಂತನಾಗಿ ಬೆಳೆಯಲು ಸಹಕರಿಸಿದರೆ ಅದಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ