ಒಂದು ಒಳ್ಳೆಯ ನುಡಿ - 263

'ಹಸಿದವಗೆ ತುತ್ತನ್ನ ನೀಡುತಲಿ ಸಹಕರಿಸು
ಹಸಿವಿನಾಳವ ಅರಿತು ನಡೆಯುತಲಿ ಮನುಜ/
ಸಸಿನೆಟ್ಟು ಬೆಳೆಸಿದಾ ಫಲವು ಸಿಗುವುದು ನಿನಗೆ
ಹಸಿದುಂಡು ಹರಸುವನು-ಕೃಷ್ಣಕಾಂತೆ'//
ನಾವು ಯಾವಾಗಲೂ ಬದುಕುವುದಕ್ಕಾಗಿ ಆಹಾರ ಸೇವಿಸೋಣ, ತಿನ್ನುವುದಕ್ಕಾಗಿ ಬದುಕುವುದು ಬೇಡ. ತಿನ್ನುವ ಆಹಾರ ಶುದ್ಧ, ಸ್ವಚ್ಛವಾಗಿ, ಪೋಷಕಾಂಶಯುಕ್ತವಾಗಿ, ಬೆಳವಣಿಗೆಗೆ ಪೂರಕವಾಗಿ, ರಾಸಾಯನಿಕ ಮುಕ್ತವಾಗಿರಲಿ. ನಾರುಯುಕ್ತ ತರಕಾರಿ, ತಾಜಾ ಹಣ್ಣುಗಳು, ಹಸಿರು ಸೊಪ್ಪುಗಳಿಂದ ಕೂಡಿರಲಿ. ಸೇವಿಸುವ ಆಹಾರ ರೋಗಕ್ಕೆ ದಾರಿ ಮಾಡಿಕೊಡದಂತಿರಲಿ. ಆಯಾಯ ಕಾಲಕ್ಕೆ, ಋತುಮಾನಗಳಿಗನುಸಾರವಾಗಿ ಬೆಳೆಯುವ ತರಕಾರಿ, ಹಣ್ಣು, ಬೇಳೆಕಾಳುಗಳನ್ನು ,ಹಸಿರು ಸೊಪ್ಪು ಬಳಸಿ ನಮ್ಮ ಆಹಾರವನ್ನು ಸಿದ್ಧಪಡಿಸಬೇಕು. ಸ್ಥಳೀಯವಾಗಿ ಸಿಗುವ ಕೆಲವೊಂದು ಸೊಪ್ಪಿನ ಎಳೆ ಚಿಗುರುಗಳಿಂದ ತಂಬುಳಿ ತಯಾರಿಸಬಹುದು. ದೇಹಕ್ಕೆ ತಂಪು ಸಹ. ಬಾಳೆಕಾಯಿ, ಬಾಳೆಹೂವು, ಬಾಳೆ ದಿಂಡು ಸರ್ವೋಪಯೋಗಿ. ಮಜ್ಜಿಗೆ ಕುಡಿಯಲು ರುಚಿ, ಶರೀರಕ್ಕೆ ಹಿತಕರ. ಹಸುವಿನ ಹಾಲು ಪುಟ್ಟ ಮಗುವಿನಿಂದ ಹಣ್ಣು ಮುದುಕರವರೆಗೂ ಆರೋಗ್ಯಕರ. ಮನೆಯ ಹೆಣ್ಣುಮಕ್ಕಳ ಕೈಯಲ್ಲಡಗಿದೆ ಆರೋಗ್ಯಯುಕ್ತ, ಶುಚಿತ್ವದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಮನೆಮಂದಿಗೆಲ್ಲ ಬಡಿಸುವ ಕಲೆ. ಬೇಸಿಗೆಯ ಬಿರುಬಿಸಿಲಿಗೆ ದ್ರವ ಆಹಾರ, ನೀರು, ಮಜ್ಜಿಗೆ, ಶರಬತ್ತು ಹೆಚ್ಚು ಹೆಚ್ಚು ತೆಗೆದುಕೊಳ್ಳುವುದು ಒಳ್ಳೆಯದು. ಮನೆಯಿಂದ ಹೊರಗೆ ಹೋಗುವಾಗ ನೀರಿನ ಬಾಟಲ್ ಜೊತೆಗಿರಲಿ. ಮೂಕಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಅವರವರ ಮನೆಯ ಪರಿಸರದಲ್ಲಿ ವ್ಯವಸ್ಥೆ ಮಾಡುವುದೊಳಿತು.
ಹಸಿವು ಬಾಯಾರಿಕೆ ಜೀವಿಗಳ ನೈಜತೆ
ನೀಡುವ ಕೈಗಳಿಗೆ ಬೇಡ ಕೊರತೆ
ತುತ್ತು ಅನ್ನದಲ್ಲಿಯೂ ಕಾಣು ಸಾರ್ಥಕತೆ
ಮನಸ್ಸು ಆಗಲಿ ನೀರಿನ ಒರತೆ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ