ಒಂದು ಒಳ್ಳೆಯ ನುಡಿ - 266

ತಾಯಿಯಿಲ್ಲದ ಮಕ್ಕಳನ್ನು ಅಮ್ಮನಿಲ್ಲದ ತಬ್ಬಲಿಗಳು ಎನ್ನುತ್ತೇವೆ. ಅವರನ್ನು ನೋಡುವಾಗ ಯಾಕೋ ಮನಸ್ಸು ಹಿಂಡುವುದು, ನೋವಾಗುವುದು, 'ಅಯ್ಯೋ' ಎನ್ನುವುದು ಸಹಜ. ಆದರೆ ತಾಯಿ ಇದ್ದೂ, ಹೆತ್ತಮ್ಮನನ್ನು ತಬ್ಬಲಿ ಮಾಡುವವರನ್ನು ಈ ಸಮಾಜದಲ್ಲಿ ಬಹಳಷ್ಟು ನೋಡಿದ್ದೇವೆ, ಕೇಳಿದ್ದೇವೆ ಅಲ್ಲವೇ? ಎಲ್ಲವೂ ಅವರವರ ಮನಸ್ಸಿನ ಭಾವನೆಗೆ ತಕ್ಕಂತೆ ವ್ಯವಹರಿಸುವುದರ ಪರಿಣಾಮ, ಇನ್ನೊಬ್ಬರ ಒತ್ತಡ ಮಾತುಗಳಿಗೆ ಕಿವಿಯಾನಿಸಿ, ತನ್ನದೇ ಸ್ವಂತ ನಿರ್ಧಾರವಿಲ್ಲದಾಗ ನಡೆಯಬಾರದ ಘಟನೆಗಳು ಘಟಿಸುವುದು ಸಹಜ. ಮಕ್ಕಳಿಗಾಗಿ ತಾಯಿ ಮಾಡುವ ತ್ಯಾಗಕ್ಕೆ ಬೆಲೆಕಟ್ಟಲಾಗದು. ವಯಸ್ಸಾದ ಅಮ್ಮನನ್ನು 'ತಾಯಿ' ಎಂದು ಪರಿಚಯಿಸಲು ಕೆಲವು ಮಕ್ಕಳಿಗೆ ಕಷ್ಟವಾಗುವುದಿದೆ. ಮಕ್ಕಳಿಗೆ ಮುಂದೆ ವಯಸ್ಸಾಗುವುದಿಲ್ಲವೇ? ಅವರ ಗತ್ತು ಗಮ್ಮತ್ತಿಗೆ ತಾಯಿಯ ಅಂದಚಂದ ಸಾಕಾಗದೆ ,ಬಂದ ಅತಿಥಿಗಳೆದುರು 'ಮನೆಕೆಲಸದವಳು' ಎಂದು ಹೇಳಿದ ಮಕ್ಕಳು ನಮ್ಮ ಸುತ್ತಮುತ್ತ ಇದ್ದಾರೆ. ಹೌದು, ಆ ಮಹಾತಾಯಿ ಮನೆಕೆಲಸದವಳೇ, ಆದರೆ ಯಾರಿಗಾಗಿ, ಯಾರಿಗೋಸ್ಕರ ಅವಳ ಜೀವ ತೇಯ್ದಿದ್ದಾಳೆಂಬ ಕಲ್ಪನೆ ಬೇಡವೇ? 'ಅಮ್ಮ' ಅಪ್ಪ ಎನುವ ಹಿರಿಯ ಜೀವಗಳ ಕಾಳಜಿ ಇರಲಿ. ಸ್ನೇಹಿತರೇ, ಉಸಿರು ನೀಡಿ, ಬಸಿರಲಿಟ್ಟು ಭೂಮಿಯ ಬೆಳಕನ್ನು ತೋರಿಸಲು ನೋವು ಅನುಭವಿಸಿದ ತಾಯಿ, ತನ್ನ ಮನೆ ಮಡದಿ ಮಕ್ಕಳನ್ನು ಸಾಕಲು ಕಷ್ಟಪಟ್ಟ ತಂದೆಯನ್ನು ಮರೆಯದಿರೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ