ಒಂದು ಒಳ್ಳೆಯ ನುಡಿ (34) - ಸುವಿಚಾರ

ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟಮಾಡಿದ್ದು, ಕೊನೆಗೊಮ್ಮೆ ಹೋದದ್ದು ಅಷ್ಟೇ ಆದೀತಷ್ಟೆ. ಹಾಗಾಗಿ ಏನಾದರೂ ಸಾಧಿಸಬೇಕೆಂದರೆ ವಯಸ್ಸಿರುವಾಗಲೇ ಪ್ರಯತ್ನಿಸೋಣ. ಇಲ್ಲದಿದ್ದರೆ *ರೈಲು ಹೋದ ಮೇಲೆ ಟಿಕೆಟ್* ತೆಗೆದ ಹಾಗೆ ಆಗಬಹುದು.
***
ಸರಳ ಸುಭಾಷಿತ
ಗೀರ್ಭಿರ್ಗುರೂಣಾಂ ಪುರುಷಾಕ್ಷರಾಭಿಸ್ತಿರಸ್ಕೃತಾ ಯಾಂತಿ ನರಾ ಮಹತ್ತ್ವಮ್/
ಅಲಬ್ಧಶಾಣೋತ್ಕಷಣಾ ನೃಪಾಣಾಂನ ಜಾತು ಮೌಲೌ ಮಣಯೋ ಲಸಂತಿ//
ಗುರುಗಳು ಶಿಷ್ಯರನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಯಾಗಿ ಬಾಳಿ ಬದುಕಲು ಬೇಕಾದ ಒಳ್ಳೆಯ ಗುಣಗಳನ್ನು ನೀಡುವವರು. ಒರಟು ಮಾತುಗಳು ಜೀವನ ರೂಪಿಸಲು ಸಹಕಾರಿಯಾಗುವಂತೆ ಇರುವುದು. ಒರಟು ಅಕ್ಷರಗಳಿರುವ ನುಡಿಗಳಿಂದ ಯಾರು ತಿರಸ್ಕಾರಕ್ಕೀಡಾಗಿರುವರೋ, ಅವರೇ ಮುಂದೆ ಒಳ್ಳೆಯ ಮನುಷ್ಯರಾಗಿ ಮಹತ್ವವನ್ನು ಪಡೆಯುತ್ತಾರೆ. ಹೇಗೆ ಸಾಣೆಯಿಂದ ತಿಕ್ಕಲ್ಪಡದ ವಜ್ರಗಳು ಅರಸರ ಮುಡಿಯಲ್ಲಿ ಮೆರೆಯಲಾರವೋ ಹಾಗೆ.
ಗುರುಗಳ ಕಠಿಣವಾದ ಮಾತುಗಳಿಗೆ ಬೇಸರ ಮಾಡಿಕೊಳ್ಳಬಾರದು. ನಮ್ಮ ಪ್ರಗತಿಗೆ ಅದುವೇ ದಾರಿದೀಪ.
ಆದರೆ ಇತ್ತೀಚೆಗೆ ಹತ್ತು ವರುಷದಿಂದ ತದ್ವಿರುದ್ಧ. ಗುರುಗಳು ಏನೂ ಹೇಳುವ ಹಾಗಿಲ್ಲ. ಅದೇ ವಿಪರ್ಯಾಸ.*ಕಾಲಾಯತಸ್ಮೈ ನಮಃ* .
ಆಧಾರ:(ರಸಗಂಗಾಧರ)
-ರತ್ನಾ ಭಟ್ ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ