ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು

ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು

ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು ಕನ್ನಡಿಯಂತೆ ಶುಭ್ರವಾಗಿಟ್ಟುಕೊಂಡರೆ, ಅದೇ ಒಂದು ದೊಡ್ಡ ಸೌಭಾಗ್ಯ. ಮನಸ್ಸು ಚಂಚಲವಾಯಿತೋ ನಾವು ಕೆಟ್ಟೆವು. ಏನನ್ನೂ ನಿರೀಕ್ಷೆ ಮಾಡದವನೇ ಅತ್ಯಂತ ಸುಖಿ. ಅವರ ಬಳಿ ನಿರಾಶೆ ಬರಲು ಹೆದರುತ್ತದೆ. ನಾವು ಹೇಳಿದ ಹಾಗೆ ಕೇಳಬೇಕು ನಮ್ಮ ಮನಸ್ಸು. ನಮ್ಮ ಹಿಡಿತದಲ್ಲಿದ್ದಾಗ ನಾವು ಸ್ವಚ್ಛ ವಾಗಿರಲು ಸಾಧ್ಯ. ನಮ್ಮ ಮನಸ್ಸಿಗೆ ಯಾವಾಗ ಕೆಟ್ಟ ಆಲೋಚನೆ ಪ್ರವೇಶ ಆಯಿತೋ, ಅಲ್ಲಿಂದ ನಾವು ಒಂದೊಂದೇ ಮೆಟ್ಟಿಲುಗಳನ್ನು (ಬದುಕಿನ) ಇಳಿಯಲು ಪ್ರಾರಂಭಿಸಿದೆವು ಎಂದೇ ಅರ್ಥ. ಯಾವುದೇ ವಿಚಾರ, ವಿಷಯ ಇವುಗಳನ್ನು ಹತ್ತು ಸಲ ಯೋಚಿಸಿ ಕೃತಿಗಿಳಿಸಬೇಕು. ನಮ್ಮ ಜೀವನ ಎನ್ನುವುದು ಕುಡಿದು ಬಿಸಾಡುವ ನೀರಿನ ಲೋಟವಲ್ಲ. ಕಷ್ಟ ಪಟ್ಟು ದುಡಿದು ಸಂಪಾದಿಸಿ ತುಂಬಿಸಬೇಕಾದ ಜೇನಿನ ಹನಿಗಳಂದದಿಯಿರಬೇಕು.

ತುಕ್ಕು ಹಿಡಿದ ಕಬ್ಬಿಣ ಅಪಾಯ,ತುಕ್ಕು ಹಿಡಿಯದ ಹಾಗೆ ಕಾಪಾಡುವುದು ನಮ್ಮ ಕೈಯಲ್ಲೇ ಇದೆ. ಆಗಾಗ ಮನಸ್ಸನ್ನು *ಸಾಣೆಗೆ* ಒಡ್ಡಬೇಕು. ಅಸೂಯೆ ಎನ್ನುವ ತುಕ್ಕು ಬಾರದಂತೆ ನೋಡಿಕೊಳ್ಳೋಣ. ದ್ವೇಷ, ಅಸೂಯೆ, ಮತ್ಸರ, ಹೊಟ್ಟೆ ಕಿಚ್ಚು, ಕೇಡು ಇವೆಲ್ಲ ಅಣ್ಣತಮ್ಮಂದಿರು. ಇವುಗಳ ಸ್ನೇಹ ಅಷ್ಟು ಒಳ್ಳೆಯದಲ್ಲ. ಒಂದು ಹೋದಾಗ ಮತ್ತೊಂದು ಬರಬಹುದು. ಇವುಗಳು ಬದುಕಿನ ಹಾದಿಯಲಿ ಶರೀರಕ್ಕೆ ಅಂಟುಗಳ ಹಾಗೆ ಅಂಟಿಕೊಂಡರೆ ಕಥೆ ಮುಗಿಯಿತು.ಬಿಡಿಸಲಾಗದ ಕಗ್ಗಂಟುಗಳು. ಇವುಗಳಿಂದ ದೂರವಿದ್ದು,ಸಾಧ್ಯವಾದರೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡೋಣ. ಒಳ್ಳೆಯ ನಿರೀಕ್ಷೆಗಳನ್ನು ಎದುರುನೋಡುತ್ತ, ಕೆಟ್ಟದಕ್ಕೆ ವಿದಾಯ ಹೇಳುತ್ತಾ ಬಾಳೋಣ ಸ್ನೇಹಿತರೇ.

-ರತ್ನಾ ಭಟ್ ತಲಂಜೇರಿ

ಚಿತ್ರ : ಶ್ರೇಯಸ್ ಕಾಮತ್, ಬೆಂಗಳೂರು