ಒಂದು ಒಳ್ಳೆಯ ನುಡಿ - 36

ಸುವಿಚಾರಗಳು
ಗಿಡಮರಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಜೀವಜಗತ್ತಿನಲ್ಲಿ ಹಸಿರು ಸಿರಿ ಸಂಪತ್ತು ದೇವನಿತ್ತ ಅಮೂಲ್ಯ ಕೊಡುಗೆ. ಹಸಿರಿಲ್ಲದ ನೆಲ ಊಹಿಸಲೂ ಸಾಧ್ಯವಿಲ್ಲ. ಈ ಸಂಪತ್ತನ್ನು ಉಳಿಸಿ, ಬೆಳೆಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಸಹ.
ನಾವೇನು ಮಾಡುತ್ತೇವೆ? ನಿರ್ದಾಕ್ಷಿಣ್ಯವಾಗಿ ಕಡಿದು ಹಾಕುತ್ತೇವೆ. ಪುನಃ ಒಂದು ಸಸಿಯನ್ನು ನೆಟ್ಟು ಪೋಷಿಸುವ ಕೆಲಸ ಮಾಡುವುದಿಲ್ಲ. ಇದರಿಂದಲೇ ಬಲ್ಲವರು ಹೇಳಿದ್ದು* ಒಂದು ಮರ ಕಡಿ,ನಾಲ್ಕು ಗಿಡ ನೆಟ್ಟು ಬೆಳೆಸಿ *
ಒಂದು ಮಾತಿದೆ, ಮಾನವ ಯಾವಾಗ ಬೀಗುವುದು ಬಿಟ್ಟು ಬಾಗಲು ಕಲಿಯುವನೋ ಆಗ ಆತ ಒಳ್ಳೆಯತನವನ್ನು ಅಳವಡಿಸಿ ಕೊಂಡ ಎನ್ನಬಹುದು. ಈ ಬಾಗುವುದನ್ನು ನಮಗೆ ಕಲಿಸಿದ್ದು ಸಸ್ಯಗಳು. ತೆನೆ ತುಂಬಿದಾಗ, ಬಾಳೆ ಗೊನೆ ಬಿಟ್ಟಾಗ, ಅಡಿಕೆ ಮರದಲ್ಲಿ ಸಿಂಗಾರ ಆದಾಗ, ಯಾವುದೇ ಗಿಡಮರಗಳಲ್ಲಿ ಫಲ ಬಿಟ್ಟಾಗ ಬಾಗುವುದನ್ನು ನೋಡುತ್ತೇವೆ. ಹಾಗಾದರೆ ಸದ್ಗುಣಗಳಿಂದ ತುಂಬಿದ ಓರ್ವ ವ್ಯಕ್ತಿ ತುಂಬಿದ ಕೊಡ ಅನಿಸಿಕೊಳ್ಳುವುದರ ಜೊತೆ ಬೀಗುವುದು ಬಿಟ್ಟು ಬಾಗಲು ಕಲಿತಾಗ ಪುಟಕ್ಕಿಟ್ಟ ಚಿನ್ನ ಆಗುವನು.
ಹಸಿರು ಸಸ್ಯಗಳಿಂದ ಸಹ ಕಲಿಯುವ ಅಂಶ ಬಹಳವಿದೆ ಅಲ್ಲವೇ? ನಮಗೆ ಉಸಿರು ನೀಡುವ ಮಹದುಪಕಾರ ಮಾಡುವ ಈ ಸಸ್ಯಗಳನ್ನು ನಾಶಮಾಡದೆ, ನೆಟ್ಟು ಬೆಳೆಸೋಣ. ನಮ್ಮ ನಮ್ಮ ಮನೆಯ ಎದುರು ಇರುವ ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಡೋಣ. ಅಲಂಕಾರಿಕವಾಗಿಯೋ, ಔಷಧಿ ಸಸ್ಯವಾಗಿಯೋ ನಳನಳಿಸಲಿ. ತುಂಬೆ, ತುಳಸಿ, ಗರಿಕೆ, ಬ್ರಾಹ್ಮೀ, ಭೃಂಗರಾಜ, ಪುದಿನಾ, ಬೇವು, ಬಾಳೆ ಇದೆಲ್ಲ ಔಷಧೀಯ ಸಸ್ಯವಾಗಿಯೂ ನಮಗೆ ಬೇಕಾಗುತ್ತದೆ. ನಮ್ಮ ಮನೆಯ ಪರಿಸರ ಆಹ್ಲಾದಕರವಾಗಿರುವಂತೆ ನಾವು ಪ್ರಯತ್ನಿಸೋಣ.
***
ಸುಭಾಷಿತ
ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್/
ಯಂ.ತು. ರಕ್ಷಿತುಮಿಚ್ಛಂತಿ ಸದ್ಭುದ್ಧ್ಯಾ ಯೋಜಯಂತಿತಮ್//
ಭಗವಂತನು ಯಾವಾಗಲೂ ಕೈಯಲ್ಲಿ ದಂಡ (ಕೋಲು,ಬಡಿಗೆ) ಹಿಡಿದು , ಮೈದಾನದಲ್ಲಿ ಮೇಯುತ್ತಿರುವ ಪಶುಗಳನ್ನು ಕಾಯುವ ಗೋವಳನಂತೆ ಇರಲು ಸಾಧ್ಯವಿಲ್ಲ. ಯಾರು ಯಾರನ್ನು ಯಾವಾಗ ಕಾಪಾಡಬೇಕು ಎಂಬುದಾಗಿ ಅವನಿಗೆ ಗೊತ್ತಿದೆ. ಹಾಗೆ ಒಳ್ಳೆಯ ಬುದ್ಧಿಯನ್ನು ಸಹ ಕಾಲಕಾಲಕ್ಕೆ ನೋಡಿ ಕೊಡುತ್ತಾನೆ. ಯಾರ ಮೇಲೆ ದಯೆ, ಕರುಣೆ ತೋರಬೇಕೋ ತೋರಿಸುತ್ತಾನೆ.
***
ಸದ್ಭಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮಕ್ಷರಂ/
ಅಸದ್ಭಿಃ ಶಪಥೇನೋಕ್ತಂ ಜಲೇ ಲಿಖಿತಮಕ್ಷರಮ್//
ಸಜ್ಜನಿಕೆಯ,ಒಳ್ಳೆಯ ಹೃದಯವಂತರು ತಮಾಷೆಗೆ ಹೇಳಿದ ಮಾತು , ಶಿಲಾಶಾಸನದ ಹಾಗೆಶಾಶ್ವತವಾಗಿರಬಹುದು.ಆದರೆ ಕೆಟ್ಟ ಮನಸ್ಸಿನವರು ದುಷ್ಟರು ಶಪಥಮಾಡಿ ಹೇಳಿದರೂ ಸಹ,ನೀರಿನ ಮೇಲೆ ಬರೆದ ಅಕ್ಷರದ ಹಾಗಿರಬಹುದು.
ಸಂಗ್ರಹ: ರತ್ನಾ ಭಟ್, ತಲಂಜೇರಿ (ಸರಳ ಸುಭಾಷಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ