ಒಂದು ಒಳ್ಳೆಯ ನುಡಿ - 37
ನಮ್ಮ ಬದುಕಲಿ ಬಂದು ಹೋಗುವ ಮೂರು ಮಂದಿ ಅತಿಥಿಗಳಿರುವರು. ಆಸ್ತಿ ಎಷ್ಟೋ ಸಲ ನಮಗೆ ಕೈಕೊಡುವುದಿದೆ. ತುಂಬಾ ಆಸ್ತಿ ಹೊಂದಿದವ ಒಂದು ದಿನ ಏನೂ ಇಲ್ಲದೆ ಇರುವುದೂ ಇದೆ. ಯಾಕಾಯ್ತು, ಹೇಗಾಯ್ತು ಎಂಬುದು ಯಾರಿಗೂ ತಿಳಿಯದು. ಒಟ್ಟಾರೆ ಅವ ದಿವಾಳಿ ಆದ, ಅರೋರಿ ಆದ ಹೇಳುವುದು ಕೇಳಿದ್ದೇವೆ. ಕೊನೆಗೆ *ಹಣೆಬರಹ* ಹೇಳ್ತೇವೆ.
ರೋಗ ಬರಬೇಡ ಎಂದರೂ ಕರೆಯದೆ ಬರುವ ಅತಿಥಿ. ನಮ್ಮ ಜೀವನ ಶೈಲಿಯೂ ಇರಬಹುದು. ಕರೆದು ಬರುವ ನೆಂಟರು ಕೆಲಸವಾದ ಮೇಲೆ ಹೊರಡುವರು. ಆದರೆ ಈ *ರೋಗವೋ* ಒಮ್ಮೆ ಶರೀರವನ್ನು ಹೊಕ್ಕರೆ ಮತ್ತೆ ಬಿಡದು. ಆಗಾಗ ಕಾಡಿಸುವುದು, ಪೀಡಿಸುವುದು ಇದ್ದದ್ದೇ. *ಗ್ರಹಚಾರ* ಹೇಳುತ್ತೇವೆ ಆಗ.
ಕಷ್ಟ, ಅಯ್ಯೋ ಹೀಗೂ ಆಯ್ತಲ್ಲ ಹಲುಬುತ್ತೇವೆ. ಕಷ್ಟ ನಮಗೆ ಬಾರದೆ ಮರಕ್ಕೆ ಬರುತ್ತದೆಯೇ? ಎಂಬ ಮಾತಿದೆ. ಮರಕ್ಕೆ ಸಹ ಕಷ್ಟ ಬಾರದೆ ಇರುತ್ತದೆಯೇ? ಅದು ಸಹ ಉಸಿರಾಡುವ ಜೀವವಿರುವುದೇ ಅಲ್ಲವೇ? ಕಷ್ಟ ಬಂದರೆ ಅಷ್ಟು ಬೇಗ ಹೋಗುವುದಿಲ್ಲ. ಇದು ಒಂದು ರೀತಿಯ ಕರೆಯದೆ ಬರುವ ಅತಿಥಿಯ ಹಾಗೆ.
ಕಷ್ಟ ನಷ್ಟ,ರೋಗ ರುಜಿನಗಳು ಬಂದಾಗ ಧೃತಿಗೆಡದೆ ಏನು ಮಾಡಬೇಕೋ ಅದನ್ನು ಮಾಡಿ ಎದುರಿಸುವ ಬಗ್ಗೆ ಆಲೋಚಿಸಬೇಕಾಗಿರುವುದು ನಾವು ತೆಗೆದುಕೊಳ್ಳಬೇಕಷ್ಟೆ. ಮತ್ತೆ ಎಲ್ಲಾ ಭಗವಂತನ ಮೇಲೆ ಭಾರ ಹಾಕಿಬಿಡ್ತೇವೆ.
ದೈನಂದಿನ ಪ್ರಕೃತಿಯ ನಡೆಯಲ್ಲಿ ಹೇಗೆ ಹಗಲು ಇರುಳು ಇದೆಯೋ ಹಾಗೆಯೇ ಇವೆಲ್ಲ. ಯಾವಾಗಲೂ ಹಗಲೇ ಇದ್ದರೆ ಹೇಗೆ? ಇರುಳು ಬರಲೇ ಬೇಕು. ಸುಖವೋ ದುಃಖವೋ ಬರಲಿ, ಎದುರಿಸಿ ಮುಂದೆ ಹೋಗಲು ಕಲಿಯೋಣ.
ಕರೆಯದೆ ಬರುವ ಅತಿಥಿಗಳ ಬಗ್ಗೆ ಜಾಗೃತರಾಗಿರೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ: ಇಂಟರ್ನೆಟ್ ತಾಣ