ಒಂದು ಒಳ್ಳೆಯ ನುಡಿ - 4

ಅಹಂ
ಅಹಂ ಎಂಬುದು ನಮ್ಮಿಂದ ಏನನ್ನೆಲ್ಲ ಮಾಡಿಸುವುದಕ್ಕು, ಮಾಡುವುದಕ್ಕೂ ಹೇಸುವುದಿಲ್ಲ. ಓರ್ವ ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೂ ಅಹಂಕಾರ ಅವನ ಶರೀರಕ್ಕೆ ಆವರಿಸಿತು ಎಂದಾದರೆ, ಅವ ಪಾತಾಳಕ್ಕೆ ಕುಸಿದ ಅಂತಲೇ ಲೆಕ್ಕ. ಎದುರಿನಿಂದ ಯಾರೂ ತೋರ್ಪಡಿಸಲಾರರು. ಆದರೆ ಬೆನ್ನ ಹಿಂದೆ ಆಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಬಿಡುತ್ತದೆ. ಹಣವಂತನಿಗಾದರೂ ಸಮಾಜದಲ್ಲಿ ಮನಸಿಲ್ಲದಿದ್ದರೂ, ಒಂದು ಸ್ಥಾನಮಾನ ಸಿಗಬಹುದು. ಬಡವನಿಗೆ, ಕಷ್ಟದಲ್ಲಿದ್ದವಗೆ ಅಹಂ ಪ್ರವೇಶ ಆದರೆ ಅಧೋಗತಿಯೇ ಸರಿ.
ಮುಖನೋಡಿ ಮಣೆ ಹಾಕುವ ಸಂಪ್ರದಾಯ ಒಮ್ಮೊಮ್ಮೆ ಕಾಣಬಹುದು. ಅದನ್ನೇ ಅಹಂಕಾರಿಯ ಬಳಿ ತೋರಿಸಿ, ಎದುರಿಂದ ಬೆಳ್ಳಗೆ ನಗೆ ಬೀರಿ ಮಾತನಾಡುತ್ತಾರೆ. ಮಾತಿನಲ್ಲಿ, ಗುಣನಡತೆಯಲ್ಲಿ, ವ್ಯವಹಾರಗಳಲ್ಲಿ, ಪ್ರತಿಯೊಂದರಲ್ಲೂ ಅಹಂ ಒಳ್ಳೆಯದಲ್ಲ. ದೇವನಿತ್ತ ಈ ಶರೀರ ಸಾರ್ಥಕವನ್ನು ಹೊಂದಬೇಕಾದರೆ, ನಾವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಇರುವುದು ಅಗತ್ಯ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದಲ್ಲವೇ? ನಾಲ್ಕು ಜನರೊಂದಿಗೆ ಕಲೆತು ಬೆರೆತು ಬದುಕು ನಡೆಸಿದಾಗ, ಸಿಗುವ ಆನಂದ ಹೇಳಲು ಪದಗಳೇ ಸಾಲದು.
ನಾನು, ನನ್ನದು, ನನ್ನಿಂದಲೇ ಎಲ್ಲಾ, ನಾನಿಲ್ಲದಿದ್ದರೆ ಏನೂ ಇಲ್ಲ ಈ ರೀತಿಯ ಅಹಂ ನಮಗೆ ಬೇಕೇ ಸ್ನೇಹಿತರೇ? ಎಲ್ಲಿ 'ನಾವು'ಎಂಬುದಿದೆಯೋ ಅಲ್ಲಿ ಭಗವಂತ ಸಹ ನೆಲೆಸುತ್ತಾನಂತೆ
ನಾನೆಂಬುದು ಪ್ರಮಾಣು, ನೀನೆಂಬುದು ಪ್ರಮಾಣು
ಸ್ವಯಂ ಎಂಬುದು ಪ್ರಮಾಣು, ಪರಂ ಎಂಬುದು ಪ್ರಮಾಣು/
ಪ್ರಮಾಣು ಎಂಬುದು ಪ್ರಮಾಣು
ಗುಹೇಶ್ವರನೆಂಬುದು ಪ್ರಮಾಣು//
ಅಲ್ಲಮಪ್ರಭುವಿನ ಈ ವಚನ, ನಾನು, ನೀನು, ಸ್ವಯಂ, ತಾನು, ಪರಂ, ಈ ಎಲ್ಲಾ ಪದಗಳು ಅಡಕವಾಗಿದೆ.ಇದೆಲ್ಲವನ್ನೂ ತೊರೆದು ನಾವು ನಾವಾಗಿಯೇ ಜೀವಿಸೋಣ. ಅಹಂ, ಅಹಂಕಾರ ಖಂಡಿತಾ ಬೇಡ. ನೆಮ್ಮದಿಯನ್ನು ಕಿತ್ತುಕೊಳ್ಳಲು ಅಹಂ ಅಡ್ಡಗೋಡೆಯಾಗುವುದು ಬೇಡ.
-ರತ್ನಾ ಭಟ್ ತಲಂಜೇರಿ