ಒಂದು ಒಳ್ಳೆಯ ನುಡಿ - 42

ಒಂದು ಒಳ್ಳೆಯ ನುಡಿ - 42

ನಮ್ಮನ್ನು ಒಂದು ವೇದಿಕೆಯಲ್ಲಿ ಗುರುತಿಸಿದ್ದಾರೆ, ಗುರುತಿಸುತ್ತಾರೆ ಎಂದಾದರೆ ಅದಕ್ಕೆ ಯೋಗ್ಯತೆ ಬೇಕು. ನಮಗೆ ಆ ಅರ್ಹತೆ ಇಲ್ಲ ಎಂದಾದರೆ, ನಾವು ಹೋಗಲೇಬಾರದು. ಬೇರೆಯವರು ನಮ್ಮತ್ತ ಬೊಟ್ಟು ಮಾಡಿ ತೋರಿಸಿ ಹೇಳುವಂತಿರಬಾರದು. ಯಾಕೆ ಇವರಿಗೆ ಅಭಿನಂದನೆ, ಇವರೇನು ಮಾಡಿದ್ದಾರೆ? ಸಮಾಜದಲ್ಲಿ ಇವರ ಪಾತ್ರವೇನು? ಎಂಬ ಪ್ರಶ್ನೆಗಳು ಏಳಬಾರದು. ಚೆನ್ನಾಗಿ ಕೆಲಸ ಕಾರ್ಯಗಳನ್ನು ಮಾಡಿ. *ವೇದಿಕೆ* ಏರೋಣ, ಆಗ ಪಡೆದದ್ದಕ್ಕೂ ಸಾರ್ಥಕ. ಹಾಗಾಗಿ ಸನ್ಮಾನ ಎಂಬುದು ಒಂದು ದೊಡ್ಡ ಹೊರೆ, ಸುಮ್ಮನೆ ಸುಮ್ಮನೆ ಆ ಹೊರೆ ಹೆಗಲಿಗೇರುವುದು ಬೇಡ. ಸಂಸ್ಕಾರ ಇಲ್ಲದವರಿಗೆ ಸನ್ಮಾನ ದೊರೆತು ಏನು ಪ್ರಯೋಜನ? ಒಳ್ಳೆಯ ಗುಣವಿಲ್ಲದವರ ಹತ್ತಿರ ಎಷ್ಟು ಹಣವಿದ್ದರೇನು? ಪ್ರಯೋಜನವಿಲ್ಲ. ಒಳ್ಳೆಯ ಕೆಲಸಗಳಿಗೆ ಆ ಹಣ ವಿನಿಯೋಗವಾಗದು. ಒಳ್ಳೆಯತನ, ಗುಣ, ಸಂಸ್ಕಾರ, ಸಾಮಾಜಿಕ ಕೆಲಸಕಾರ್ಯಗಳು, ನೈತಿಕತೆ ಎಲ್ಲವನ್ನೂ ಮೈಗೂಡಿಸಿಕೊಂಡಾಗ ತಾನಾಗಿಯೇ *ವೇದಿಕೆ* ಸಿಗಬಹುದು, ಅದಕ್ಕೆ ಬೆಲೆಯೂ ಇದೆ.

***

ಸ್ವಾರ್ಥಿಗಳು ತಮ್ಮ ಕಾರ್ಯ ಸಾಧನೆಗಾಗಿ ಮುಖಸ್ತುತಿ ಮಾಡುತ್ತಾರೆ. ಅವರ ಮಾತಿನ ಧಾಟಿ ನೋಡಿದಾಗಲೇ ನಾವು ತಿಳಿಯಬಹುದು, ಇದು ಕೇವಲ ಸ್ವಾರ್ಥದ ಮಾತು ಎಂಬುದಾಗಿ. ಯಾರ *ಹೊಗಳಿಕೆ ತೆಗಳಿಕೆಗಳು* ನಮಗೆ ಬೇಡ. ಕೃತ್ರಿಮ ಮುಖಸ್ತುತಿಯನ್ನು ಸಜ್ಜನರೆನಿಸಿದವರು ಅರಿಯದೆ ಇರುವುದಿಲ್ಲ. ಹಾಗೆಂದು ಮಾತಾಡುವವರ ಸ್ನೇಹವನ್ನು ಬಿಡಲಾರ.ಕಾರಣ ದಾಕ್ಷಿಣ್ಯದ ಗುಣ. ಅವನಾಗಿ ಹೋಗುವುದಾದರೆ ಬಿಟ್ಟು ಹೋಗಲಿ ಎಂದು ಕಾಯುತ್ತಾರೆ.

ಯಾವ ಕೆಲಸ ಹೇಳಿದರೂ ಮಾಡಿಕೊಡುತ್ತಾರೆ.‌ ಸಜ್ಜನರನ್ನು ದಡ್ಡರೆಂದು ಯಾವತ್ತೂ ಪರಿಗಣಿಸಬಾರದು. ಎಲ್ಲವನ್ನೂ ಕೇಳಿಸಿಕೊಳ್ಳುವವ ಎಂದು ಸಹ ತಿಳಿಯಬಾರದು. ಆಶಾಭಂಗ ಮಾಡುವುದು ಅವರಿಗೆ ಇಷ್ಟವಿಲ್ಲ ಅಷ್ಟೆ.

ಮುಖಸ್ತುತಿಯ ಸ್ನೇಹಿತರಿಗೆ ನಾವು ನೆರವನ್ನು ನೀಡುವ ಬಗ್ಗೆ ಒಂದು ಸುಭಾಷಿತವಿದೆ.

*ಯದ್ ವಂಚನಾಹಿತಮತಿರ್ಬಹುಚಾಟುಗರ್ಭಂ

ಕಾರ್ಯೋನ್ಮುಖಃ ಖಲಜನಃ ಕೃತಕಂ ಬ್ರವೀತಿ/

ತತ್ಸಾಧವೋ ನ ನ ವಿದಂತಿ ವಿದಂತಿ ಕಿಂತು

ಕರ್ತುಂ ವೃಥಾ ಪ್ರಣಯಮಸ್ಯ ನ ಪಾರಯಂತಿ//*

ಯಾವ ಸಂದರ್ಭದಲ್ಲಿ ಸಹ ಒಳ್ಳೆಯ ಮನಸ್ಸುಳ್ಳವರನ್ನು *ದಡ್ಡರೆಂದು* ನಾವು ಹೇಳಬಾರದು. ಅವರು ಕೇವಲ ದಾಕ್ಷಿಣ್ಯಕ್ಕೆ ಒಳಗಾಗುತ್ತಾರೆ ವಿನಹಃ ಬೇರೊಂದಲ್ಲ. *ಕೃತ್ರಿಮತೆ*ಯೊಳಗೆ  *ಮೈತ್ರಿ* ಹಾಳಾಗಬಾರದೆಂಬ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು.

-ರತ್ನಾ ಕೆ.ಭಟ್, ತಲಂಜೇರಿ

(ಆಧಾರ:ಸರಳ ಸುಭಾಷಿತ)