ಒಂದು ಒಳ್ಳೆಯ ನುಡಿ - 43
ಪರಿಶುದ್ಧವಾದ ಬುದ್ಧಿಯಿರುವವಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಮನಸ್ಸನ್ನು ಒಳ್ಳೆಯ ರೀತಿಯ ಆಲೋಚನೆಗಳತ್ತ ಒಯ್ಯದೆ, ಏನು ಮಾಡಿದರೂ ನಿಷ್ಪ್ರಯೋಜನ. ಹಲವಾರು ಶಾಸ್ತ್ರಗಳನ್ನು ಓದಿ, ಇತರರಿಗೆ ಅದನ್ನು ಉಪದೇಶ ಮಾಡುತ್ತಾರೆ. ಆದರೆ ಸ್ವಯಂ ಅನುಕರಣೆ ಇಲ್ಲದಿದ್ದಾಗ ಏನು ಪ್ರಯೋಜನ? ಈ ಬಗ್ಗೆ ಭಗವಾನ್ ಶಂಕರಾಚಾರ್ಯರು ಒಂದು ಶ್ಲೋಕವನ್ನು ಈ ರೀತಿ ಹೇಳುವುದನ್ನು ನಾವು ಓದಿ,ಅರ್ಥೈಸಿಕೊಳ್ಳಬಹುದು.
ವಾಗ್ವ್ಯೆಖರೀ ಶಬ್ದಝರೀ ಶಾಸ್ತ್ರವ್ಯಾಖ್ಯಾನ ಕೌಶಲಮ್/
ವೈದುಷ್ಯಂ ವಿದುಷಾಂ ತದ್ವತ್ ಭುಕ್ತಯೇ ನತು ಮುಕ್ತಯೇ//
ಪಂಡಿತರ ವಾಗ್ಝರಿ, ಶಬ್ದಗಳ ಪ್ರಯೋಗ, ಶಾಸ್ತ್ರವಿವರಣೆಯಲ್ಲಿ ಕೌಶಲ, ಪಾಂಡಿತ್ಯ, ಇವೆಲ್ಲ ಭೋಗಕ್ಕೆ ಸಾಧನವಾಗಬಲ್ಲುದೇ ವಿನಃ ಮುಕ್ತಿ ಮಾರ್ಗಕ್ಕಲ್ಲ. ಮನದಲ್ಲಿ ಮಾಲಿನ್ಯ ವಿಟ್ಟುಕೊಂಡು, ಶಾಸ್ತ್ರದಲ್ಲಿರುವುದನ್ನು ಆಚರಣೆಗೆ ತಾರದೆ, ವ್ಯಾಖ್ಯಾನ ಮಾಡಿದರೆ ಕೇವಲ ಉದರ ಪೋಷಣೆ ಮಾತ್ರ. ಹೊಗಳುವ, ಹೇಳುವ ಪಾಂಡಿತ್ಯ ಆತ್ಮಜ್ಞಾನವ ಬೆಳೆಸದು.
ನಿರ್ಮಲ ಮನಸ್ಸು, ಶುದ್ದ ಅಂತಃಕರಣ, ಅನುಷ್ಠಾನ ಇದ್ದರೆ ಮಾತ್ರ ಪಡೆದ ಜ್ಞಾನದ ಸಾಕ್ಷಾತ್ಕಾರವಾದೀತು.
ಕೊಳಕಾದ, ಶುಚಿಯಿಲ್ಲದ ಪಾತ್ರೆ, ಲೋಟಗಳಲ್ಲಿದ್ದ ನೀರನ್ನು ನಾವು ಕುಡಿಯಲು ಸಾಧ್ಯವೇ?
ಪ್ರತಿಯೊಂದಕ್ಕೂ ಈಶ್ವರನ ಅನುಗ್ರಹ ಬೇಕು.ಧರ್ಮವನ್ನು, ಜ್ಞಾನವನ್ನು, ಅನುಷ್ಠಾನ ಯಾರು ಮಾಡುವನೋ, ಅವನಿಗೆ ಈಶ್ವರಾನುಗ್ರಹ ಖಂಡಿತಾ ಇದೆ.ಉತ್ತಮ ಗುರುಗಳಿಂದ ಎಲ್ಲವನ್ನೂ ಕಲಿತು, ಜ್ಞಾನ ಸಂಪನ್ನರಾಗಿ, ಆತ್ಮಜ್ಞಾನವ ಗಳಿಸೋಣ. ಉನ್ನತಿ ಹೊಂದೋಣ.
(ಆಧಾರ:ಉಪದೇಶ ಸುಧಾ)
-ರತ್ನಾ ಕೆ.ಭಟ್, ತಲಂಜೇರಿ