ಒಂದು ಒಳ್ಳೆಯ ನುಡಿ - 44
ನಾವು ಸನಾತನ ಧರ್ಮದ ಬಗ್ಗೆ ದೃಷ್ಟಿ ಹಾಯಿಸಿದಾಗ ಕಂಡು ಬರುವುದು ಮುಖ್ಯವಾಗಿ ಮೂರು ತತ್ವಗಳು.
*ಧರ್ಮ,ಕರ್ಮ,ಮೋಕ್ಷ* . ನಮ್ಮ ಭಾರತೀಯ ಪರಂಪರೆಯಲ್ಲಿ ಸನಾತನ ಧರ್ಮವೆಂಬುದು ಅನಾದಿಕಾಲದಿಂದಲೂ ಬಂದಿರುತ್ತದೆ. ಕೇವಲ ಓರ್ವ ವ್ಯಕ್ತಿ ಯಿಂದಾದ ಧರ್ಮವಲ್ಲ, ಹೇಳಿಕೆಯಲ್ಲ, ಪ್ರತಿಪಾದನೆಯಲ್ಲ. ಯಾವುದನ್ನು ನಮ್ಮ ಜೀವನಮಾರ್ಗದಲ್ಲಿ ಅಳವಡಿಸಿಕೊಂಡು, ಸಾತ್ವಿಕತೆ, ಕ್ರಮವರಿತ ನೇಮನಿಷ್ಠೆಯಿಂದ ಸಾಗುತ್ತೇವೋ ಅದುವೇ ಧರ್ಮ. ಧರ್ಮ ಎಂದ ತಕ್ಷಣ ಮಾನವತ್ವ, ಸಹಕಾರ, ಧನಸಹಾಯ ಎಂಬ ಒಂದೇ ಅರ್ಥವಲ್ಲ. ಧರ್ಮ ಎಂಬ ಪದ ವಿಶಾಲವಾದ ಅರ್ಥವನ್ನು ಹೊಂದಿದೆ.
ಸನ್ಮಾರ್ಗ, ದಾನ, ಸಹನೆ, ಸಂಯಮ, ಪ್ರೇಮ, ಆರ್ದ್ರತೆ ಇವು ಸಹ ಹಾಸುಹೊಕ್ಕಾಗಿವೆ.ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು.ಕೆಲಸಕಾರ್ಯಗಳನ್ನು ಕರ್ತವ್ಯ ಲೋಪ ಬಾರದಂತೆ ಮಾಡುವುದು.ಗುರುಹಿರಿಯರನ್ನು ಗೌರವಿಸಿ, ಭಯಭಕ್ತಿಯಿಂದ ಕಾಣುವುದು.ದೇವರು ಎಂದರೆ ಏನೆಂದು ಅರ್ಥ್ಯೆಸಿಕೊಂಡು ವ್ಯವಹರಿಸುವುದು. ಉಡಾಫೆ ಮಾತುಗಳನ್ನಾಡದಿರುವುದು.ಕಳ್ಳತನ, ಮೋಸ, ಸುಲಿಗೆ, ವಂಚನೆ, ದ್ರೋಹ ಮಾಡದಿರುವುದು. ಮಾತಿನಲ್ಲಿ ಶುದ್ಧತೆ, ಕ್ರಮವಿರಲಿ .ಅವಾಚ್ಯ ಪದಗಳ ಪ್ರಯೋಗ, ನಿಂದನೆ, ಇತರರಿಗೆ ನೋವುಂಟುಮಾಡುವ ವರ್ತನೆ ಇಲ್ಲದಿರಲಿ. ತಾನೇ ಎಲ್ಲ, ತನ್ನಷ್ಟು ಯಾರಿಗೂ ಗೊತ್ತಿಲ್ಲ ಎನ್ನುವ ಅಹಂ ಯಾಕೆ? ಬೇರೆಯವರಿಗೂ ಮನಸ್ಸಿದೆ, ಸ್ವಾಭಿಮಾನವಿದೆ ಎನ್ನುವುದು ತಿಳಿದಿರಲಿ. ತಾನು ಹೇಳಿದ್ದೇ ಆಗಬೇಕೆಂದು ಬಯಸುವುದು ಬೇಡ. ಹೊಂದಾಣಿಕೆ ಮುಖ್ಯ. ಈ ಎಲ್ಲಾ ಸಮ್ಮಿಲನಗೊಂಡ ಬದುಕೇ *ಧರ್ಮ* ದ ತಿರುಳು. ಯಾವಾಗ ಧರ್ಮ ಮಾರ್ಗದಲ್ಲಿ ಸಾಗುತ್ತೇವೋ ಆಗ ಕರ್ಮ ಉಂಟಾಗದು.
ನಾವು ಮಾಡುವ ಕೆಲಸ, ಇಡುವ ಹೆಜ್ಜೆ, ಇದರಲ್ಲಿ ಕರ್ಮ ಅಡಗಿದೆ. ಧರ್ಮ ಅಳವಡಿಸದಾಗ ಕರ್ಮ ಸುತ್ತಿಕೊಳ್ಳಬಹುದು. ಹಾಗಾಗಿ ಧರ್ಮ ಕರ್ಮಗಳನ್ನು ಅರಿತು ನಡೆಯೋಣ. ಜನ್ಮ ಜನ್ಮಾಂತರದಲ್ಲಿ ಬೆನ್ನು ಬಿಡದ ಬೇತಾಳ ಕರ್ಮ ಎಂಬುದು ಜ್ಞಾಪಕವಿರಲಿ.
ಯಾವಾಗ ಕರ್ಮಬಂಧನದಿಂದ ಬಿಡುಗಡೆ, ಮುಕ್ತಿ ದೊರಕುವುದೋ, ಪುನರ್ಜನ್ಮ, ರಹಿತವಾದ, ವಿಶ್ವ ಚೈತನ್ಯದಲ್ಲಿ ನೆಲೆನಿಲ್ಲುವುದೋ ಇದೇ ಮೋಕ್ಷ. ಹಾಗಾದರೆ ಎಲ್ಲದಕ್ಕೂ ಕಾರಣ ಧರ್ಮಾಚರಣೆ. ಎಲ್ಲವನ್ನೂ ಅಳವಡಿಸಿ, ಸಾಧ್ಯವಿದ್ದಷ್ಟು ಮಟ್ಟಿಗೆ ಬದುಕಿ ಬಾಳೋಣ.
-ರತ್ನಾ ಭಟ್, ತಲಂಜೇರಿ
ಸಂಗ್ರಹ:ವಿವಿಧ ಮೂಲಗಳಿಂದ