ಒಂದು ಒಳ್ಳೆಯ ನುಡಿ - 47

ಒಂದು ಒಳ್ಳೆಯ ನುಡಿ - 47

ಒಬ್ಬ ಉತ್ತಮ ಮನುಷ್ಯ ಅಂದುಕೊಂಡವನ ನಡೆನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರುತ್ತದೆ. ಅವನೇನಾದರೂ ತಪ್ಪು ಎಸಗಿದ ಎಂದಾದರೆ 'ಛೇ, ಅವನೂ ಹೀಗೆ ಮಾಡಿದ ಅಂದರೆ ನಂಬಲು ಸಾಧ್ಯವಿಲ್ಲ’ ಹೇಳ್ತೇವೆ. ಯಾಕೆಂದರೆ ಅವನ ಮೇಲೆ ಅಷ್ಟು ನಂಬಿಕೆಯಿರುತ್ತದೆ. ಒಂದು ಸಲ ನಂಬಿಕೆ ಹೋಯಿತಾ, ಜೀವಮಾನವಿಡೀ ಅವನನ್ನು ಯಾರೂ ನಂಬುವುದಿಲ್ಲ. ಕಳ್ಳತನವೇ ವೃತ್ತಿ ಮಾಡಿಕೊಂಡವ ಎಷ್ಟು ಒಳ್ಳೆಯವನಾದರೂ ಯಾರು ನಂಬ್ತಾರೆ? ಜೈಲಿಗೆ ಹೋಗಿ ಬಂದವನನ್ನು ವಕ್ರ ದೃಷ್ಟಿಯಿಂದ ನೋಡುವುದು ಸಹಜ. ಈ ಪ್ರಪಂಚವೇ ಹಾಗಿದೆ. ಎಲ್ಲಾ ನಾವು ನೋಡುವ ದೃಷ್ಟಿಯಲ್ಲಿರುತ್ತದೆ. ಹೇಳಿದರೂ ಪರಿವರ್ತನೆ ಮಾಡಿಕೊಳ್ಳದವರೇ ಇರುವುದು.

***

ಮಾನವ ಮಾನವನಾಗಿ ಬದುಕನ್ನು ನಡೆಸದಿದ್ದರೆ ಏನಾಗುತ್ತದೆ ಎಂಬ ಅರಿವು ಈಗಾಗಲೇ ನಮಗಾಗಿದೆ. ಪ್ರಕೃತಿಯ ಕಗ್ಗೊಲೆಯಿಂದ, ಮನುಷ್ಯನ ಮಿತಿ ಮೀರಿದ ಸ್ವಾರ್ಥ, ದಾಹ, ಪೈಶಾಚಿಕ ಕೃತ್ಯದಿಂದ, ಭೂಮಿತಾಯಿ ಮುನಿದಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ. *ತಲೆಗೆರೆದ ಎಣ್ಣೆ ಕಾಲಿಗಿಳಿಯಲೇ ಬೇಕು*.ನಾಣ್ನುಡಿ. ನಾವು ಮಾಡಿದ್ದನ್ನು ನಾವೇ ಉಣ್ಣಬೇಕಷ್ಟೆ. ಪ್ರಕೃತಿ ರಾಕ್ಷಸಿಯಾಗಿ ತಿರುಗಿ ಬಿದ್ದಳೇ ಅನ್ನಿಸ್ತಾ ಇದೆ.ಖಂಡಿತಾ, ಎರಡು ಮಾತಿಲ್ಲ. ಮಾಡಿದ ದ್ರೋಹದ ಫಲ ಅಷ್ಟೇ.

ಈ ಕಷ್ಟ ಕಾಲದಲ್ಲೂ ಒಂದಕ್ಕೆ ಹತ್ತು ಪಟ್ಟು ಹಣ ಸಂಪಾದನೆ ಮಾಡಲು (ವಾಮಮಾರ್ಗದಲ್ಲಿ) ನೋಡ್ತಾ ಇದ್ದಾರೆ ಎಂದರೆ , ಮನುಷ್ಯನ ದಾಹ ಅಡಗುವುದೆಂದು? ಕೊನೆ ಇಲ್ಲವೇ? ಆದರೆ ಬಲಿಯಾಗುವುದು ಅತ್ಯಂತ ಬಡವರು, ಅಮಾಯಕರು, ನೊಂದವರು, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದವರು ಎಂಬುದು ನಗ್ನಸತ್ಯ.

ಸ್ನೇಹಿತರೇ, ಮುನ್ನೆಚ್ಚರಿಕೆ ವಹಿಸೋಣ, *ಜೀವ ಜೀವನ ಎರಡೂ ನಮ್ಮ ಕೈಯಲ್ಲಿದೆ* ಮರೆಯದಿರೋಣ. ಮನುಷ್ಯತ್ವದ ನಿಜ ಪರಿಚಯವಾಗುವುದು ಇಂಥ ಸಂದರ್ಭಗಳಲ್ಲಿ ಮಾತ್ರ. ಸಹಾಯ ಮಾಡಲಾಗದಿದ್ದರೂ ತೊಂದರೆಯಿಲ್ಲ ದೂರವಿದ್ದೇ ನಾಲ್ಕು ಸಾಂತ್ವನದ ಮಾತುಗಳ ಹೇಳೋಣ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ