ಒಂದು ಒಳ್ಳೆಯ ನುಡಿ (48) - ನಮ್ಮ ಆಸ್ತಿ

ಒಂದು ಒಳ್ಳೆಯ ನುಡಿ (48) - ನಮ್ಮ ಆಸ್ತಿ

ಈಗ ಈ ಕಾಲಘಟ್ಟದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮನೆಯ ಸದಸ್ಯರಿಗೆ ಬಹಳ ಮುಖ್ಯ.(ಹಿರಿಯರು ಹೇಗೂ ಇದ್ದಾರೆ) ಶಾಲಾ ಚಟುವಟಿಕೆ ಇಲ್ಲ. ಅದು ಇದ್ದಾಗ ಒಂದು ರೀತಿಯ ಯಾಂತ್ರಿಕತೆ. ಆದರೆ ಈಗ ಹಾಗಲ್ಲ. ಕೆಲವೊಂದು ಕಡೆಗಳಲ್ಲಿ ಆನ್ಲೈನ್ ತರಗತಿಗಳು ಸಮರ್ಪಕವಾಗಿ ನಡೆಯುತ್ತಿದೆ.(ನಮ್ಮ ಮೊಮ್ಮಗ 4ನೇ ಕ್ಲಾಸು, ಅವನಿಗೆ ಸರಿಯಾಗಿ ಆನ್ಲೈನ್ ತರಗತಿ ನಡೆಸ್ತಾ ಇದ್ದಾರೆ)

ಉಳಿದ ಸಮಯದಲ್ಲಿ ಏನು ಮಾಡಬಹುದು? ಇಲ್ಲಿ ತಾಯಿಗೆ ಮಾತ್ರ ಜವಾಬ್ದಾರಿ ಅಲ್ಲ. ಮನೆಯ ಎಲ್ಲರೂ ಸೇರಿ, ಪುಟ್ಟ ಮಕ್ಕಳ ಬಗ್ಗೆ ಗಮನಹರಿಸಿ, ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬಹುದು. ಕೆಲವು ಆಟಗಳನ್ನು ಆಡುವುದು, ಲೂಡೋ, ಚೆಸ್, ಹಾವು-ಏಣಿ, ಕವಡೆ, ಕಡ್ಡಿ, ಟೊಪ್ಪಿ ಆಟ ಇತ್ಯಾದಿ. ಹಳ್ಳಿ ಪ್ರದೇಶದಲ್ಲಿ ಕಲ್ಲಾಟ ಬಹಳ ವಿಶೇಷ. ಅಲ್ಲಿ ತೋಟ, ಗುಡ್ಡ, ಅಂಗಳ, ಹಟ್ಟಿ, ದನಕರುಗಳು ಎಂದು ವಿಶಾಲವಾದ ವ್ಯವಸ್ಥೆಗಳಿವೆ. ದೊಡ್ಡವರೊಂದಿಗೆ ಮಕ್ಕಳೂ ಸೇರಿ ಸಮಯ ಕಳೆಯುವರು. ಜೊತೆಗೆ ಓದು, ಬರಹ, ಡ್ರಾಯಿಂಗ್, ಕಥೆ ಇತ್ಯಾದಿ. ಸ್ವಲ್ಪ ಸಮಯ ಟಿ.ವಿಯಲ್ಲಿ ಅವರದೇ ಆದ ಕಾರ್ಟೂನ್ ಗಳನ್ನೂ ನೋಡಬಹುದು. ಹಳ್ಳಿ ಯ ಪರಿಸರದ ವಾತಾವರಣವೇ ಭಿನ್ನವಾಗಿ ರುತ್ತದೆ.

ಪೇಟೆಯಲ್ಲಿ, ಕಾಂಕ್ರೀಟ್ ಮಧ್ಯದಲ್ಲಿ, ಫ್ಲಾಟ್ ಗಳಲ್ಲಿ, ಲೇಔಟಲ್ಲಿ, ಮಕ್ಕಳನ್ನು ಹೊರಗೆ ಕಳುಹಿಸುವ ಹಾಗಿಲ್ಲ. ಎಲ್ಲಾ ಮಕ್ಕಳು ಈಗ ಮನೆಯೊಳಗಿನ ಗುಬ್ಬಚ್ಚಿಗಳಾಗಿದ್ದಾರೆ. ಬಾಗಿಲು ತೆರೆದು ಹೊರಬರಲು ಮುಖಗವುಸು ಕಡ್ಡಾಯ ಬೇಕು. ಇಂಥ ಸ್ಥಿತಿಯಲ್ಲಿ ಮಗುವನ್ನು ಸಂಭಾಳಿಸುವುದು ಹೇಗೆ?

ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಹೆತ್ತವರಿಗೆ ಟೈಮಿಲ್ಲ. ಎಲ್ಲಾ *ಒಂದೊಂದು ಕಂಪ್ಯೂಟರ್, ಲ್ಯಾಪ್ ಟಾಪ್* ಎದುರು ದಿನವಿಡೀ ಕುಳಿತು ಕಛೇರಿ ಕೆಲಸ (ವರ್ಕ್ ಫ್ರಾಮ್ ಹೋಮ್) ಮಾಡುವವರೇ ೯೫%. ಹಾಗಾದರೆ ಮಗುವಿನ ಅವಸ್ಥೆ. ಹೊರಗಿನಿಂದ ಯಾರೂ ಬರುವ ಹಾಗಿಲ್ಲ.

ನಮ್ಮ ಪಕ್ಕದ ಮನೆಯಲ್ಲಿ 1ವರುಷದ ಮಗುವಿದೆ. ಇಬ್ಬರಿಗೂ ಕೆಲಸದ ಒತ್ತಡ. ಒಂದಷ್ಟು ಆಟಿಕೆಗಳನ್ನು ಹರವಿ ಹಾಕಿ ತಮ್ಮ ಕೆಲಸ ಮಾಡುವುದು ನೋಡಿದ್ದೇನೆ. ಹೊತ್ತು ಹೊತ್ತಿಗೆ ಆಹಾರ ತಿನ್ನಿಸ್ತಾರೆ. ಪಾಪ! ಆ ಮಗು ಹೆಚ್ಚು ಹಠ ಮಾಡದ್ದು ಅವರ ಭಾಗ್ಯ.

ಸ್ವಲ್ಪ ದೊಡ್ಡ ಮಕ್ಕಳಾದರೆ, ಕಥೆ ಪುಸ್ತಕ ಓದುವುದು, ರಂಗು ರಂಗಾಗಿ ಕಥೆ ಹೇಳುವುದು (ಅಜ್ಜ ಅಜ್ಜಿ ಇದ್ದರೆ) ಚಿತ್ರ, ಆಟಗಳು ಇತ್ಯಾದಿ. ಒಟ್ಟಿನಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ಕೊಡುವುದರ ಮೂಲಕ ಮೆದುಳಿಗೆ ಮೇವು ಕಡ್ಡಾಯವಾಗಿ ಕೊಡಬಹುದು. ನಾವೆಲ್ಲ ಚಿಕ್ಕವರಿದ್ದಾಗ ಒಂದು ಮದುವೆ ಆಟ ಆಡ್ತಾ ಇದ್ದೆವು. ಅದನ್ನು ಪುನಃ ನೆನಪಿಸಬಹುದು. ಹೊಸ ಪದಗಳ ಬರಹ, ವಾಕ್ಯರಚನೆ, ಘಟನೆಯ ಸುತ್ತ ಹೆಣಿಕೆ, ಅಭಿವ್ಯಕ್ತಿ ಸಹ ಬೇಕಲ್ಲ? ಏನೋ ಒಂದು ನೋಡಿ ಕಲ್ಪನೆಯ ಸುತ್ತ ಬರವಣಿಗೆ ಇಂಥ ಚಟುವಟಿಕೆ ಮಾಡಿಸಬಹುದು. ಸರಳ ವ್ಯಾಯಾಮ, ಯೋಗ ಇತ್ಯಾದಿ ಸಹ ಮಾಡಿಸಬಹುದು.

ಅತಿಯಾದ ಮುದ್ದು ದಯವಿಟ್ಟು ಬೇಡ. ಪ್ರೀತಿಯಿಂದ ತಿಳಿ ಹೇಳೋಣ. ಅಗ್ನಿಪರೀಕ್ಷೆಯಿಂದಲೇ ಅಪ್ಪಟ ಚಿನ್ನ ಸಿಗುವುದಲ್ಲವೇ? ಪುಸ್ತಕದ ಎಲ್ಲಾ ವಿಸ್ಮಯದ ಪರಿಚಯ ಮಗುವಿಗಾಗಲಿ. ಪರಿಸರ ವೀಕ್ಷಣೆ ತನ್ನ ಮನೆಯ ಸುತ್ತ ಕಲಿಸೋಣ, ಕಂಡದ್ದನ್ನು ಹೇಳಲು ಹೇಳೋಣ. ಸತ್ಯವನ್ನು ಮಾತನಾಡುವುದು ಕಲಿಸೋಣ. ಆತ್ಮವಿಶ್ವಾಸ, ನಂಬಿಕೆ, ದೃಢತೆ, ಸೋಲು ಗೆಲುವು ಕಲಿಸೋಣ. ಉತ್ತಮ ಪೋಷಕಾಂಶ ಭರಿತ, ಮನೆಯಲ್ಲಿ ಇದ್ದುದರಲ್ಲಿಯೇ ಮಾಡಿಕೊಡೋಣ. ಯಾರಿಗೂ ನೋವು ಕೊಡಬಾರದು, ಅಹಂಕಾರ ಬರಬಾರದು, ಮಾನವೀಯ, ನೈತಿಕ ಮೌಲ್ಯಗಳನ್ನು ತಿಳಿಸೋಣ.

ಒಟ್ಟಿನಲ್ಲಿ ನಮ್ಮ ಮನೆಯ ಮಕ್ಕಳ ಆರೋಗ್ಯ, ಹಿತ ನಮ್ಮ ಕೈಯಲ್ಲಿಯೇ ಇದೆ, ಮುಂದಿನ ನಮ್ಮ ಸಮಾಜದ ಆಸ್ತಿ  ಮಕ್ಕಳು, ಅವರನ್ನು ಜೋಪಾನವಾಗಿ ನೋಡಿ, ಅವರ ಹಿತವನ್ನು ಕಾಪಾಡೋಣ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರದಲ್ಲಿ ರಜಾ ಸಮಯದಲ್ಲಿ ಅಕ್ಕ ತಮ್ಮನಿಗೆ ಪಾಠ ಹೇಳುವುದು

ರೂಪದರ್ಶಿಗಳು:  ಮಾಲ್ವಿ ಹಾಗೂ ಹವಿಕ್ಷ್, ಕುಂಪಲ