ಒಂದು ಒಳ್ಳೆಯ ನುಡಿ - 50

ಒಂದು ಒಳ್ಳೆಯ ನುಡಿ - 50

ನಮಗೆ ಒಮ್ಮೊಮ್ಮೆ ಕೆಟ್ಟವರು ಯಾರು ಒಳ್ಳೆಯವರು ಯಾರು ಅರಿತುಕೊಳ್ಳಲು ಕಷ್ಟವಾಗುತ್ತದೆ. ಪ್ರೀತಿಯ ಮಾತುಗಳನಾಡಿ, ಬಣ್ಣ ಬಣ್ಣದ ರೀತಿಯಲಿ ವರ್ಣಿಸಿ, ನಾನೇ ಎಲ್ಲಾ ಗೊತ್ತಿರುವವ, ಬುದ್ಧಿವಂತ ಎಂಬ ಹಾಗೆ ವ್ಯವಹರಿಸುತ್ತಾರೆ. ಅಂಥವರನ್ನು ನಂಬಿ ಮೋಸ ಹೋಗುತ್ತೇವೆ. ಎಲ್ಲಿ ಅತಿಯಾದ ಹೊಗಳಿಕೆ ಇದೆಯೋ ಅಲ್ಲಿ ಬೆನ್ನ ಹಿಂದೆ ಕತ್ತಿ ಮಸೆಯುವುದು ಗ್ಯಾರಂಟಿ. ಇದೆಲ್ಲ ಜೀವನಾನುಭವ ಕಲಿಸಿದ ಪಾಠಗಳು. ಹೋಗಲಿ, ಅವರ ಬುದ್ಧಿ ಗೊತ್ತಾಗಿ ಹೊರಬರುವ ಅಂದರೆ, ಅದಾಗಲೇ ವಿಷವರ್ತುಲದಲ್ಲಿ ಸಿಕ್ಕಿ ಒದ್ದಾಡಿ, ಗುದ್ದಾಡಿ ಎಲ್ಲಾ ಮುಗಿದಿರುತ್ತದೆ. ಮತ್ತೆ ತಾನೇ ದೊಡ್ಡ  *ಬ್ರಹ್ಮಜ್ಞಾನಿ* ಅಂಥ ಮಾತಾಡುವ ಸ್ವಭಾವವಾಗಿರುತ್ತದೆ. ಯಾರು ನೇರ ಮಾತು, ವ್ಯವಹಾರ‌ ಮಾಡುತ್ತಾರೋ ಅಂಥವರ ಮನಸ್ಸಿನ ಒಳಾರ್ಥ ತಿಳ್ಕೊಳ್ಳುವ ಜನ ಕಡಿಮೆ. ಅವನ ಬಗ್ಗೆ ಈಗಾಗಲೇ ಇಲ್ಲಸಲ್ಲದ ಸುದ್ಧಿ ಹಬ್ಬಿಸಿ *ರಾಡಿಯಾಗಿಸಲೂ* ಹೇಸದ ಒಂದು ವರ್ಗ ಇದ್ದೇ ಇರುತ್ತದೆ.

ಈಗ ಅಂಥವರಿಂದ ಬಿಡುಗಡೆ ಹೊಂದುವುದೇ ಪರಿಹಾರ. ಒಳ್ಳೆಯ ಮಾತುಗಳನ್ನು ಹೇಳಿ ಅವರನ್ನು ತಿದ್ದಲು ಸಾಧ್ಯವಿಲ್ಲ. ಬಿಟ್ಟು ಬಿಡೋಣ, ದೂರವೇ ಇರೋಣ. ಅವರ ಒಳಗಿರುವ ದುರ್ಗುಣ, ಕೆಟ್ಟತನವೇ ನಿಧಾನಕ್ಕೆ ಅವರನ್ನು ಬದಲಾಯಿಸುತ್ತದೆ. ಯಾವಾಗಲೂ ಆದಷ್ಟೂ ಉತ್ತಮರ ಸಂಗವನ್ನೇ ಮಾಡೋಣ. *ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ದುರ್ಜನರು ಮೈಯಮೇಲಿನ ತುರಿಕಜ್ಜಿನಂತೆ* ಅಲ್ಲವೇ?

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ