ಒಂದು ಒಳ್ಳೆಯ ನುಡಿ - 53

ಒಂದು ಒಳ್ಳೆಯ ನುಡಿ - 53

ಸಾಮಾನ್ಯವಾಗಿ ವಿವೇಕಿಗಳು ಎಂದರೆ ಎಲ್ಲಾ ಗೊತ್ತಿದ್ದವರು, ವಿವೇಚಿಸದೆ ಯಾವುದೇ ಕೆಲಸಕ್ಕೂ ಕೈ ಹಾಕದವರು ಎನ್ನಬಹುದು. ಯಾವ ವಿಷಯವಾಗಲಿ, ಒಂದು ಕೆಲಸವಾಗಲಿ ಅದರ ಬಗ್ಗೆ ಸರಿಯಾಗಿ ವಿಮರ್ಶಿಸಿ ಮುಂದೆ ಹೋಗುವ ಸ್ವಭಾವದವರು. ಅವರು ಅಹಂಕಾರಿಗಳಾಗಿರುವುದಿಲ್ಲ. ಎಲ್ಲರಿಂದಲೂ ತಮಗೆ ಬೇಕಾದ್ದನ್ನೆಲ್ಲ ಕೇಳಿ, ಅನುಭವಗಳನ್ನು ಪಡೆಯುವ ಮನೋಸ್ಥಿತಿಯುಳ್ಳವರು. ಎಲ್ಲದರಲ್ಲೂ ಇರುವ ಒಳ್ಳೆಯದನ್ನು ಕಲಿಯುವ ಹಂಬಲ ಅವರಿಗಿದೆ. ಅವರ ಕಲಿಯುವಿಕೆ ಯಾವತ್ತೂ ಹರಿಯುವ ನೀರಿನಂತೆ, ನಿಂತ ನೀರಾಗಲು ಬಯಸುವುದಿಲ್ಲ.

ಸಾಮಾನ್ಯರು ತಮ್ಮ ಅನುಭವಗಳಿಂದ ಕಲಿಯುವರು. ಹೆಚ್ಚು ವಿಮರ್ಶೆಗೆ ಹೋಗಲಾರರು. ಇದ್ದುದರಲ್ಲಿಯೇ ಸಾಕೆನ್ನುವ ವರ್ಗದವರು. ಮೂರ್ಖರು ಮಾತ್ರ ಯಾರು ಹೇಳಿದ್ದನ್ನು ಕೇಳುವವರಲ್ಲ. ಅವರಿಗೆ ತಾವು ಹೇಳಿದ್ದೇ ಸರಿ ಎನ್ನುವ ಮೊಂಡು ಹಠ ಮತ್ತು ಛಲ. ಹಿರಿಯರು , ಕಿರಿಯರು, ಅನುಭವದ ಸಾರ ಉಂಡವರು, ಸಂಸಾರ ಸಾಗರದಿ ಈಜಾಡಿ ಜ್ಞಾನ, ತಿಳುವಳಿಕೆ ಗಳಿಸಿದವರು ಎಂಬ ಯಕಶ್ಚಿತ್ ಪ್ರಜ್ಞೆ ಸಹ ಇಲ್ಲ. ಒಟ್ಟಾರೆ ಹೇಳುವುದು, ಮಾತನಾಡುವುದು, ನನ್ನಷ್ಟು ಪ್ರಜ್ಞಾವಂತ ಇನ್ನಾರೂ ಇಲ್ಲ ಎಂಬ ಭ್ರಮಾಲೋಕದಲ್ಲಿ ತೇಲಾಡುವವ ಶತಮೂರ್ಖರ ವರ್ಗ.

ಕಲಿಯಬೇಕೆಂದು ಅನಿಸುವುದೇ ಇಲ್ಲ, ಎಲ್ಲಾ ಗೊತ್ತಿದೆ ಎಂಬ ಅಹಂ ಅಡ್ಡ ಬರುವುದು. ಯಾವತ್ತೂ ಇಂಥ ಮೊಂಡು ಮನಸ್ಸಿನವರಿಂದ ದೂರವಿದ್ದಷ್ಟೂ ಆರೋಗ್ಯವಾಗಿರಬಹುದು. ನಮ್ಮ ಆರೋಗ್ಯ, ನಮ್ಮ ಮನಸ್ಸು, ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವ ಹಾಗೆ ನೋಡಿಕೊಂಡು, ಇರುವಷ್ಟು ದಿನ ನೆಮ್ಮದಿಯಲ್ಲಿ ಇರೋಣ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ : ಇಂಟರ್ನೆಟ್ ತಾಣ