ಒಂದು ಒಳ್ಳೆಯ ನುಡಿ - 57

ಜೀವನ ಸಾರ ಎಂದು ಯಾವುದನ್ನು ಹೇಳಬಹುದೆಂದು ಒಮ್ಮೆ ಘನಪಂಡಿತರ ಹತ್ತಿರ ಓರ್ವ ಕೇಳಿದಾಗ, "ನಿನಗೆ ಮದುವೆ ಯಾಗಿದೆಯೇ? ಮಕ್ಕಳಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರಂತೆ. ಅದಕ್ಕೆ ಅವನು ಕೊಟ್ಟ ಉತ್ತರ 'ಇಲ್ಲ ಸ್ವಾಮಿ' 'ಹೋಗು, ಮೊದಲು ಉತ್ತಮ ಮನೆತನದ ಕನ್ಯೆಯನ್ನು ನೋಡಿ ಮದುವೆಯಾಗಿ, ಹತ್ತು ವರ್ಷ ಸಂಸಾರ ಮಾಡಿ ಬಾ, ಆಮೇಲೆ ಜೀವನ ಸಾರದ ಬಗ್ಗೆ ಹೇಳ್ತೇನೆ ಎಂದರಂತೆ.
ಈತ ಬಂದವನೆ ಪಂಡಿತರು ಹೇಳಿದ ಹಾಗೆ ಮದುವೆಯಾದ, ಎರಡು ಮಕ್ಕಳ ತಂದೆಯೂ ಆದ.ಘನಪಂಡಿತರ ಹತ್ತಿರ ಬಂದಾಗ ಅವರಾಗಿಯೇ ಪ್ರಶ್ನಿಸಿದರಂತೆ. ಜೀವನ ಸಾರ ಅಂದರೆ ಏನು? ನನಗೂ ಸ್ವಲ್ಪ ಹೇಳು ಎಂದು. ಸ್ವಾಮೀ, ಏನೂ ಹೇಳಲಾರೆ ,ಎಲ್ಲಾ ಅರಿತೆ ಎನ್ನುತ್ತಾ ಸಾಷ್ಟಾಂಗ ನಮಸ್ಕರಿಸಿದನಂತೆ. ಪಂಡಿತರು ಕೇವಲ ಮುಗುಳ್ನಕ್ಕರಂತೆ.
ಸ್ನೇಹಿತರೇ, ಬಾಲ್ಯದಲ್ಲಿ ಹಿರಿ ಕಿರಿಯರೊಂದಿಗೆ ಕೂಡಿ ಆಡುತ್ತೇವೆ. ಶಾಲಾ ಜೀವನದಿ ಗೆಳೆಯರೊಂದಿಗೆ ಒಡನಾಟ, ಕಲಿಕೆ. ಯೌವನದಲ್ಲಿ ಏನೇನೋ ಕನಸುಗಳು, ಹಾಗಾದರೆ ಚಂದ, ಹೀಗಿದ್ದರೆ ಚಂದ ಎಂಬುದಾಗಿ.ವಿಷಯ ಸುಖವನ್ನು ಅನುಭವಿಸುವ ಕಾಲವದು. ಜೊತೆಗೆ ವಿವೇಚನೆ ಕೆಲಸ ಮಾಡುತ್ತದೆ.
ವಯಸ್ಸಾದಾಗ ಕುಟುಂಬ ಸದಸ್ಯರ ಸಹಕಾರ ಬೇಕು. ಹಳೇ ದಿನಗಳ ಮೆಲುಕು ಒಮ್ಮೊಮ್ಮೆ ಖುಷಿ ನೀಡಬಹುದು. ಆದರೆ ಆಗ ಕೆಲವು ಬಂಧನಗಳು ನಮ್ಮನ್ನು ಬಿಡು ಅಂದರೂ ಬಿಡಲಾರದು. ಮುಕ್ತ ವಾತಾವರಣ ಬೇಕು ಅನಿಸಿದರೂ ನಗು, ಅಳು, ನೋವು, ನಲಿವು ಯಾವುದರಲ್ಲಿಯೂ ಇರದೇ ಇದ್ದಾಗ ಮನಸ್ಸಿನ ಮೂಲೆಯಲ್ಲಿ ಬೇಸರ. ಕಾರಣ ಆಂತರಿಕ ಒತ್ತಡ ಮುಕ್ತತೆಯನ್ನು ತಡೆಯುತ್ತದೆ.
ಈಗ ನಾವೇನು ಮಾಡಬಹುದು? ಇರುವ ದಿನಗಳನ್ನು, ಇರುವಷ್ಟು ಕಾಲ ಹಸನಾಗಿಸಲು ಪ್ರಯತ್ನಿಸಬೇಕು. ನಮ್ಮ ಯೋಜನೆ ಯೋಚನೆಗಳನ್ನು ಬದಲಾಯಿಸಿಕೊಳ್ಳೋಣ. ಮಾತಿನ ಧಾಟಿ ಬದಲಾಯಿಸೋಣ. ಮಾತುಗಳನ್ನು ಕೃತಿಗಳಾಗಿಸೋಣ, ಬೇರೆಯವರ ಸಹಕಾರದ ಮೂಲಕ. ಅಭ್ಯಾಸ, ಹವ್ಯಾಸ ಬದಲಾಯಿಸಿಕೊಳ್ಳೋಣ.
*ದೂರದ ಬೆಟ್ಟ ನುಣ್ಣಗೆ* ಅಲ್ಲವೇ? ಅದು ಬೇಡ, ಎಟುಕದ ನಕ್ಷತ್ರ ಕ್ಕೆ ಕೈಚಾಚುವುದು ಬಿಟ್ಟು, ಹತ್ತಿರ ಇರುವುದನ್ನು ಬಳಸುವುದು ಸರಿಯಲ್ಲವೇ?
ನಮ್ಮ ಜೀವನ ಅನ್ನುವುದು *ತೂತುಗಳಿರುವ ಬಕೀಟಿನಲ್ಲಿ ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕಿದಂತೆ*
ಇಲ್ಲದೇ ಇರುವುದನ್ನು ಅಪೇಕ್ಷೆ ಪಡದೆ, ಅದನ್ನು ಉಪೇಕ್ಷಿಸಿ, ಇರುವುದರಲ್ಲಿ ತೃಪ್ತ ಜೀವನ ಹೊಂದೋಣ.
-ರತ್ನಾ ಕೆ.ಭಟ್, ತಲಂಜೇರಿ
(ಅನುಭವಗಳ ಬುತ್ತಿ ಯಿಂದ)