ಒಂದು ಒಳ್ಳೆಯ ನುಡಿ - 59
ನಿಯತಕಾಲಿಕೆ ಓದುತ್ತಿರುವಾಗ ಒಂದು ಮಾತು ಕಣ್ಣಿಗೆ ಬಿತ್ತು. *ಬಾಳೆಂಬ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಗಳು ಎಲ್ಲರ ಪಾಲಿಗೆ ಒಂದೇ ರೀತಿ ಇರಬೇಕೆಂದೇನು ಇಲ್ಲ. ತಮ್ಮ ಪಾಲಿಗೆ ಬಂದ ಪ್ರಶ್ನಾಪತ್ರಿಕೆಗಳಿಗೆ, ಸಮರ್ಪಕವಾಗಿ ಮತ್ತು ಸಮರ್ಥವಾಗಿ ಉತ್ತರ ಕಂಡುಕೊಂಡವರಷ್ಟೆ ಇಲ್ಲಿ ಉತ್ತೀರ್ಣರಾಗಲು ಸಾಧ್ಯ. ಎಷ್ಟು ಅರ್ಥ ಗರ್ಭಿತ ನುಡಿಗಳು. ತಮ್ಮ ಪಾಲಿಗೆ ಏನು ಬರುತ್ತದೆ ಅದನ್ನು ಸ್ವೀಕರಿಸಿ, ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾದರೆ ನಾವು ಬದುಕನ್ನು ಗೆದ್ದಂತೆ.
ಆದರೆ ನಾವೇನು ಮಾಡುತ್ತೇವೆ ಆಚೆಯವರ ಈಚೆಯವರ ಬದುಕಿಗೆ ಇಣುಕುತ್ತೇವೆ. ಅದರ ಬಗ್ಗೆಯೇ ಮಾತನಾಡುತ್ತೇವೆ *ನಮ್ಮ ಊಟದ ಬಟ್ಟಲಿಗೆ ಹೆಗ್ಗಣ ಬಿದ್ದರೂ ಅವರ ಬಟ್ಟಲಿಗೆ ನೊಣ ಬಿದ್ದಿದೆ*, ಎಂದು ಕಂಡಕಂಡವರ ಹತ್ತಿರ ಹೇಳಿಕೊಂಡು ಲೇವಡಿ ಮಾಡುವುದು, ಸಮಾಜದಲ್ಲಿ ಕಂಡು ಬರುವ ಕಟುಸತ್ಯ. ಅವರಿವರ ಮನೆ, ಮನುಷ್ಯರ ಬಗ್ಗೆ ತಲೆಕೆಡಿಸಿ ಇವನ ಆಯುಷ್ಯ ಹೋಗುವುದು ಗೊತ್ತಾಗುವುದೇ ಇಲ್ಲ. ಎಚ್ಚರ ಆಗುವಾಗ ಎಲ್ಲಾ ಮುಗಿದು ಹೋಗಿರುತ್ತದೆ. ಇಂದು ಈಗ ಮಾತನಾಡಿದವ ಸ್ವಲ್ಪ ಹೊತ್ತಿಗೆ ಏನಾದಿತೆಂದು ಹೇಳಲು ಸಾಧ್ಯವಿಲ್ಲದ ಈ ಕಾಲಘಟ್ಟದಲ್ಲಿ ಪ್ರತಿ ನಿಮಿಷವೂ ಅತ್ಯಮೂಲ್ಯ.
ಬಾಳಿನ ಪರೀಕ್ಷೆಗೆ ಒಂದಷ್ಟು ತಯಾರು ಮಾಡಿಕೊಂಡು ಮುನ್ನೆಡೆಯೋಣ. ಅದೇನು ಪ್ರಶ್ನೆಗಳು ಇರ್ತದೋ ಬರ್ತದೋ ಅದಕ್ಕೆ ಆದಷ್ಟೂ ಉತ್ತಮ ಉತ್ತರ ಕಂಡು ಹುಡುಕಿ ಯಶಸ್ವಿಯಾಗೋಣ. ಬೇರೆಯವರ ವಿಷಯ, ಅವರ ಬದುಕು, ಅವರ ಜೀವನಶೈಲಿ ನಮಗ್ಯಾಕೆ? ಕಷ್ಟ ಬಂದಾಗ, ದುಃಖ ಹೇಳಿಕೊಂಡಾಗ ಸ್ಪಂದಿಸೋಣ. ಸುಮ್ಮನೆ ತಲೆ ಹಾಕಿ ಅಲ್ಲಿಯೂ ಬಿರುಗಾಳಿ ಎಬ್ಬಿಸುವುದು ಬೇಡ. ನಮ್ಮ ಮನೆ, ನಮ್ಮ ಮನೆಯ ಸದಸ್ಯರ ಬಗ್ಗೆ ಕಾಳಜಿ ಇರಲಿ. ಎಷ್ಟೋ ಹೆತ್ತವರು ಹೇಳುವುದು ಕೇಳಿದ್ದೇನೆ 'ಅವ ಮನೆಗೆ ಮಾರಿ ಪರರಿಗೆ ಉಪಕಾರಿ' ಎಂಬುದಾಗಿ, ಯಾಕೆ ಹೀಗೆ? ಮೊದಲು ಮನೆಗೆ ಉಪಕಾರಿಯಾಗಿ ಸಹಕರಿಸಿ, ನಂತರ ಬೇರೆಯವರ ಬಗ್ಗೆ ಕಾಳಜಿ ವಹಿಸಿ, ಎರಡನ್ನು ಸರಿದೂಗಿಸಿಕೊಂಡು ಹೋದವನೇ ಜಾಣ. ಇರುವುದರಲ್ಲಿ ಸಂತೃಪ್ತಿ, ಸಂತೋಷ ಕಾಣುತ್ತ, ಏನು ಬಂದರೂ ಹೆದರದೆ ಮುಂದೆ ಸಾಗೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಅಂತರ್ಜಾಲ