ಒಂದು ಒಳ್ಳೆಯ ನುಡಿ (6) - ಗೆಳೆತನ

ಒಂದು ಒಳ್ಳೆಯ ನುಡಿ (6) - ಗೆಳೆತನ

ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿಸುತ್ತದೆ. ಆಗ ಸ್ವಲ್ಪ ನೀರನ್ನು ಚಿಮುಕಿಸುತ್ತೇವೆ. ಹಾಲಿಗೆ ಬೇಸರ, ಛೇ, ಈ ನನ್ನ ಮಿತ್ರ ನನ್ನನ್ನು ಬಿಟ್ಟು ಹೋಗ್ತಾ ಇದ್ದಾನಲ್ಲ ಅಂತ. ಪುನಃ ನೀರು ಚಿಮುಕಿಸಿದಾಗ ಹಾಲಿಗೆ ಸಂತಸ, ನನ್ನ ಮಿತ್ರ ಬಂದನಲ್ಲ ಅಂತ. ಆಗ ಹಾಲು ಶಾಂತವಾಗುತ್ತದೆ. ಇದುವೇ ನಿಜವಾದ ಗೆಳೆತನ, ಮಿತ್ರತ್ವ ಎಂದರೆ.

ಯಾವನು ಕಷ್ಟ ಕಾಲದಲ್ಲಿ ಹೆಗಲಿಗೆ ಹೆಗಲು ಕೊಡುವನೋ ಅವನೇ ನಿಜವಾದ ಸ್ನೇಹಿತ. ಇತರರಿಗೆ ಬಂದ ಕಷ್ಟ ತನ್ನದು, ತಾನು ಮೂರೂ ಹೊತ್ತು ಹೊಟ್ಟೆ ತುಂಬಾ ಉಣ್ಣುವಾಗ, ಅವನು ಒಂದು ಹೊತ್ತಾದರೂ ಉಣ್ಣಲಿ ಎಂದು ಭಾವಿಸಿ, ಸಹಾಯ ಮಾಡುವವನೇ ನಿಜವಾದ ಗೆಳೆಯ.

ಕೆಲವು ಸಲ ನಮ್ಮಲ್ಲಿ ಕೊಡಲು ಏನೂ ಇಲ್ಲ, ಆಗ ಅವನಿಗೆ ನಾಲ್ಕು ಸಾಂತ್ವನದ ನುಡಿಗಳನ್ನು ಹೇಳಿದರೆ, ಅದರಿಂದ ಸಮಾಧಾನವಾದರೂ ಸಿಗಬಹುದು. ಮಾತು ದೇವರಿತ್ತ ವರ. ಅದಕ್ಕೆ ಹಣ ಕೊಡುವುದು ಬೇಡ. ಮಾತಾನಾಡುವುದರಲ್ಲಿ ದೊಡ್ಡಸ್ತಿಕೆ, ಬಿಗುಮಾನ ಯಾಕೆ? ಅದುವೇ ಒಂದು ಸಂಪತ್ತು. ಗೆಳೆತನ ಮಾಡುವುದು ದೊಡ್ಡದಲ್ಲ. ಅದನ್ನು ಕಡೇವರೆಗೆ ಉಳಿಸುವುದರಲ್ಲೇ ಇರುವುದು. ಇಂದಿನ ಜಂಜಾಟದ ಬದುಕಿನಲ್ಲಿ ಸ್ನೇಹಿತರ ಅವಶ್ಯಕತೆ ಖಂಡಿತಾ ಬೇಕು. ಎಷ್ಟೋ ವಿಷಯಗಳನ್ನು ನಾವು ಸ್ನೇಹಿತರಲ್ಲಿ ಹೇಳಿಕೊಂಡು ಹೃದಯ ಹಗುರ ಮಾಡಿಕೊಳ್ಳುತ್ತೇವೆ. ಒಳ್ಳೆಯ ಸ್ನೇಹಿತರನ್ನು ಹೊಂದಲು ಪುಣ್ಯ ಬೇಕು. ನಮ್ಮ ಬದುಕಲ್ಲಿ ಉತ್ತಮ ಸ್ನೇಹಿತರನ್ನೇ ಆಯ್ಕೆ ಮಾಡೋಣ,ಆಗದೇ?

-ರತ್ನಾ ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ನಿಂದ ಸಂಗ್ರಹಿತ