ಒಂದು ಒಳ್ಳೆಯ ನುಡಿ - 61
ನಾವು ಜೀವನದಲ್ಲಿ ಅದೆಷ್ಟೋ ಮಜಲುಗಳನ್ನು ದಾಟುತ್ತೇವೆ. ದಾರಿ ಕ್ರಮಿಸುತ್ತಿರುವಾಗ, ಎಲ್ಲಿಯಾದರೂ ದಾರಿ ತಪ್ಪಿದರೆ, ಪುನಃ ಹಿಂದಿರುಗಿ ನೋಡಿ ಅಥವಾ ಯಾರ ಹತ್ತಿರವಾದರೂ ಕೇಳಿ ಸರಿ ದಾರಿಯಲ್ಲಿ ಹೋಗುತ್ತೇವೆ, ಹೋಗಬಹುದು. ಎಲ್ಲಿಯಾದರೂ ನಾವು ಆಡಿದ ಮಾತುಗಳನ್ನು ತಪ್ಪಿದರೆ ಏನಾಗಬಹುದು ಯೋಚಿಸೋಣ. ಅವನಿಗೆ ಹೇಳಿದ ಮಾತಿಲ್ಲ, ಅವನು ಹೇಳುವುದೆಲ್ಲ ಬಂಡಲ್, ಬರೇ ಕಂಬಿ ಇಲ್ಲದ ರೈಲು ಬಿಡ್ತಾನೆ ಎಂದು ಹೇಳಿಯಾರು, ಹೇಳುತ್ತಾರೆ ಸಹ. ಜೀವನಾನುಭವದಲ್ಲಿ ಇಂಥ ಉದಾಹರಣೆಗಳು ಸಾಕಷ್ಟಿವೆ. ಒಂದು ಸಲ ಸಿಕ್ಕಿಬಿದ್ದರೆ ಅವನ ಮಾತಿಗೆ ಎಳ್ಳಿನಷ್ಟೂ ಬೆಲೆ ಯಾರೂ ಕೊಡಲಾರರು. ಮಾತನಾಡುವಾಗ ಆಲೋಚಿಸಿ, ಅರಿತು ಮಾತನಾಡೋಣ. ನಮ್ಮತನ ಎಂಬುದು ಮುಖ್ಯ. ಅದನ್ನು ಸಮಾಜದ ಕಣ್ಣಿಗೆ ಹರಾಜು ಹಾಕಿದರೆ ನಾವು ಬದುಕಿಯೂ ಸತ್ತಂತೆ.
ಹಾಗೆಂದು ಕೆಲವು ಜನರಿಗೆ ಮಾತೇ ಬಂಡವಾಳ. ಜೀವನಕ್ಕೆ ದಾರಿ. ಸುಳ್ಳನ್ನು ಸಹ ತಲೆಗೆ ಬಡಿದ ಹಾಗೆ ಹೇಳುವವರು. ಇಂಥವರಿಗೆ ಬಲಿಯಾಗುವುದು ಅಮಾಯಕರು, ವೃದ್ಧರು, ಪಾಪದವರು, ಮಕ್ಕಳು.
ಒಂದು ಘಟನೆ ನೆನಪಾಯಿತು. ನಾನು ಬಸ್ಸಿನಲ್ಲಿ ಶಾಲಾ ಕೆಲಸದ ನಿಮಿತ್ತ ಕಛೇರಿಗೆ ಹೋಗುತ್ತಿರುವಾಗ, ಓರ್ವ ವಯಸ್ಸಾದ ಮಹಿಳೆ ನನ್ನ ಹತ್ತಿರ ಕುಳಿತಿದ್ದರು. ಅವರಾಡಿದ ಮಾತು ಕೇಳಿ ಕಣ್ಣಾಲಿಗಳು ಒದ್ದೆಯಾಯಿತು. ಪಾಪದ ಮಹಿಳೆ, ಬಡವರು ನೋಡುವಾಗಲೇ ತಿಳಿಯಿತು. ಅವರು ಬಸ್ಸಿಗೆ ನಿಂತುಕೊಂಡಿರುವಾಗ, ಓರ್ವ ಬಳಿ ಬಂದು ತುಂಬಾ ಪರಿಚಯದವನಂತೆ ಮಾತನಾಡಿ (ಚಾ ಪರ್ಕ ಬಲೆ) ಚಾ ಕುಡಿಯುವ ಬನ್ನಿ ಅಂಥ ಹೇಳಿ ಹತ್ತಿರವಿದ್ದ ಹೋಟೆಲಿಗೆ ಕರಕೊಂಡು ಹೋದನಂತೆ. ಇವರು ಅವನ ಮಾತಿಗೆ ಮರುಳಾಗಿ ಹೋದರು. ಅಜ್ಜಮ್ಮ, 'ನಿಮ್ಮ ಕುತ್ತಿಗೆಯಲ್ಲಿರುವ ಕರಿಮಣಿ ಸರ ತುಂಬಾ ಚಂದ ಇದೆ, ಒಮ್ಮೆ ಸರಿಯಾಗಿ ಕೈಯಲ್ಲಿ ಹಿಡಿದು ನೋಡಲು ಆಸೆ,ಕೊಡಿ ' ಎಂದನಂತೆ. ಇವರು ತೆಗೆದು ಕೊಟ್ಟರು. ಅವನು ಅಲ್ಲಿಂದ ಓಟಕಿತ್ತ. ಅಜ್ಜಿ ಬಾಯಿಬಾಯಿ ಬಡಿದರೂ ಏನೂ ಪ್ರಯೋಜನವಾಗಲಿಲ್ಲವಂತೆ. ಒಂದೆರಡು ಜನ ಅಲ್ಲಿ ಇದ್ದವರು ಪೋಲೀಸ್ ಸ್ಟೇಷನಿಗೆ ಹೋಗಿ ಎಂದು ಹೇಳಿ ಸ್ವಲ್ಪ ಹಣ ಸಹ ನೀಡಿ ಕಳುಹಿಸಿದರಂತೆ. ಹಾಗೆ ಸ್ಟೇಷನಿಗೆ ಹೋಗುವ ಅಜ್ಜಿ ಯನ್ನು ನಾನು, ಬಸ್ಸಿಳಿದು ಕರೆದುಕೊಂಡು ಹೋಗಿ ಕೂರಿಸಿ, ನಡೆದ ವಿಷಯವನ್ನು ಅಲ್ಲಿ ಹೇಳಿ ಸಹಕರಿಸಿದೆ. ಅಲ್ಲಿಯ ಎಸ್,ಐ. ಅವರು ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಬರುವ ಕಾರಣ ಪರಿಚಯವಿತ್ತು. ಅಯ್ಯೋ ಈ ವೃದ್ಧೆಯ ಗೋಳಾಟ ನೋಡಲಾಗುತ್ತಿರಲಿಲ್ಲ. ಕಾರಣ ಇಷ್ಟೆ, ವೃದ್ಧೆಯ ಗಂಡನಿಗೆ ತುಂಬಾ ಹುಶಾರಿಲ್ಲ, ಇರುವ ಮಕ್ಕಳು ನೋಡುವುದಿಲ್ಲ, ಕರಿಮಣಿ ಅಡವು ಇಟ್ಟು ಹಣಪಡೆದು, ಅಜ್ಜನನ್ನು ಆಸ್ಪತ್ರೆಗೆ ದಾಖಲಿಸಲು ಅಜ್ಜಿ ಬಸ್ಸಿಗೆ ಕಾಯುತ್ತಾ ನಿಂತದ್ದಂತೆ. ಮತ್ತೆ ಸ್ಟೇಷನ್ ನಲ್ಲಿಯೇ ಸ್ವಲ್ಪ ಹಣ ಸಂಗ್ರಹ ಮಾಡಿ, ನಾನೂ ಸ್ವಲ್ಪ ನೀಡಿ ಅಜ್ಜಿಯನ್ನು ಮನೆಗೆ ಕಳುಹಿಸಿದ್ದಾಯಿತು. ಒಂದೆರಡು ತಿಂಗಳಾದ ಮೇಲೆ ಎಸ್.ಐ.ಅವರು ಆ ಸರ ಕದ್ದವ ಸಿಕ್ಕಿದ್ದಾನೆ ಎಂದು ಫೋನ್ ಮಾಡಿ ತಿಳಿಸಿದರು. ನೋಡಿ ಇಂಥ ಕಟುಕರ ಬಣ್ಣದ ಮಾತಿಗೆ ಮರುಳಾಗಬಾರದು.
ಮಾತು ಮಾತಿನಂತಿರಲಿ. ಮನೆಮನ ಕೆಡಿಸದಂತಿರಲಿ. ಅಮಾಯಕರನ್ನು ಸುಲಿಗೆ ಮಾಡದಂತಿರಲಿ. ಮಾತಿನ ಧಾಟಿ ವ್ಯತ್ಯಾಸವಾಗಿ ಎಷ್ಟೋ ಅವಿಭಕ್ತ ಕುಟುಂಬಗಳು ಹೋಳಾದದ್ದನ್ನು ಕಂಡಿದ್ದೇವೆ. ಸಂಬಂಧಗಳಲ್ಲಿ ಬಿರುಕು ಮೂಡಲು ಕಟು ಮಾತುಗಳೇ ಕಾರಣ. ಇರಿಯುವ, ಚುಚ್ಚುವ ಮಾತುಗಳು ಮನಸ್ಸನ್ನು ಘಾಸಿಗೊಳಿಸುತ್ತದೆ. 'ನಾಲ್ಕು ಏಟು ಕೊಟ್ಟರೂ ಒಮ್ಮೆಗೆ ಮಾತ್ರ, ಆದರೆ ಮಾತು ಜೀವಮಾನವಿಡೀ'ಇರ್ತದೆ.
ನಾವು ಮಾತುಗಳನ್ನು ಆಡುವಾಗ ಯೋಚಿಸಿ, ಇನ್ನೊಬ್ಬರಿಗೆ ಧಕ್ಕೆಯಾಗದಂತೆ, ಅವರನ್ನು ಯಾಮಾರಿಸದಂತೆ ಆಡೋಣ. ಮಾತು ಸಂಬಂಧಗಳನ್ನು ಒಡೆಯದೆ ಬೆಸೆಯುವಂತಿರಲಿ. ಎಲ್ಲಾ ನಮ್ಮ ನಮ್ಮ ಕೈಯಲ್ಲಿದೆ. ತಪ್ಪದಿರೋಣ. ಒಬ್ಬರಿಗೆ ಮಾತು ಕೊಡುವಾಗ ಜಾಗ್ರತೆ ವಹಿಸೋಣ. 'ಮಾತೇ ಮುತ್ತು, ಮಾತೇ ಮಾಣಿಕ್ಯ' ನೆನಪಿರಲಿ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ