ಒಂದು ಒಳ್ಳೆಯ ನುಡಿ - 62

ಒಂದು ಒಳ್ಳೆಯ ನುಡಿ - 62

ಭಾಷೆ ಎನ್ನುವುದು ಪೀಳಿಗೆಯಿಂದ ಪೀಳಿಗೆಗೆ ಬರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಮಾತನಾಡಲು ಬಾರದ ಸಣ್ಣ ಮಗು ಸಂಜ್ಞೆಗಳ ಮೂಲಕ ಎಲ್ಲಾ ದೈನಂದಿನ ಚಟುವಟಿಕೆ ಮಾಡುವುದಿದೆ. ಪ್ರತಿಯೊಂದಕ್ಕೂ ಬೆರಳು ತೋರಿಸಿ ತನ್ನ ಕೆಲಸವನ್ನು ಸಾಧಿಸುವುದು. ತಾಯಿ ಮತ್ತು ಮನೆಯ ಇತರ ಸದಸ್ಯರು ಹೆಚ್ಚೆಚ್ಚು ಮಗುವಿನ ಹತ್ತಿರ ಮಾತನಾಡಿದಷ್ಟು, ಮಗು ಬೇಗ ಮಾತು ಕಲಿಯುತ್ತದೆ. ಮಕ್ಕಳು ಸಂಜ್ಞೆ ಮಾಡುತ್ತಾರೆಂದು,ದೊಡ್ಡವರು ಸಂಜ್ಞೆ ಮಾಡಿದರೆ ೫ ವರ್ಷವಾದರೂ ಮಗುವಿಗೆ ಸ್ಪಷ್ಟ ಮಾತು ಬಾರದು.

ಭಾಷೆ ವ್ಯವಹರಿಸಲು ಮಾಧ್ಯಮ. ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ದಾರಿ.ಆದರೆ ನಾವೇನು ಮಾಡ್ತೇವೆ, ಭಾಷೆಯನ್ನು ಉತ್ತಮತೆಯಲ್ಲಿ ಬಳಸುವುದು ಬಿಟ್ಟು ಅಧಮತೆಯ ಹಾದಿಯತ್ತ ಸಾಗುತ್ತೇವೆ. ಎಲ್ಲಿ ಭಾಷೆ ಸಡಿಲವಾಯಿತೋ, ವಕ್ರದಾರಿಗೆ ಹೋಯಿತೋ ಅಲ್ಲಿ ನಾವು ಸೋಲನ್ನು ಮೈಮೇಲೆ ಎಳಕೊಂಡಂತೆ *ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು* ಅನುಭವಿಗಳಾದ ಹಿರಿಯರ ಮಾತು.

ಸತ್ಯವಲ್ಲವೇ? ಈ ನುಡಿ. ಮಾತಿಗೆ ಮಾತು ಬೆಳೆದು ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ, ನಾವು ಕಣ್ಣಾರೆ ಕಂಡಿದ್ದೇವೆ. ರೋಷದಲಿ ಮಾತನಾಡುವಾಗ, ಧ್ವನಿ ಎತ್ತರಿಸುವಾಗ, ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ವ್ಯವಹರಿಸುತ್ತಾರೆ. *ಕೋಪದಲಿ ಕೊಯಿದ(ಕತ್ತರಿಸಿದ) ಮೂಗು ಮತ್ತೆ ಬರಲು ಸಾಧ್ಯವೇ?*

ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಇಂಥ ಅನಾಹುತಗಳು ಆಗದು. 'ಮಾತೇ ಮಾಣಿಕ್ಯ, ಮಾತೇ ಮುತ್ತು, ಮಾತೇ ನಮ್ಮ ಬದುಕಿನ ರಹದಾರಿ' ಉತ್ತಮ ರೀತಿಯಲ್ಲಿ ನಾವಾಡುವ ಮಾತುಗಳಿರಲಿ. ಬಳಸುವ ಪದಗಳು ಎಲ್ಲರೂ ಒಪ್ಪುವಂತಿರಲಿ, ತೂಕದ್ದಿರಲಿ. ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳದಂತಿರಲಿ. ಮಾತು ನಮ್ಮ ಜೀವನದ ಅಮೂಲ್ಯ ಆಭರಣ, ನವರತ್ನವಿದ್ದಂತೆ.

ಆ ದೇವನಿತ್ತ ಕೊಡುಗೆಯನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳೋಣ. ಮಾತನ್ನು ಅನಪೇಕ್ಷಿತ ಬಂಡವಾಳ ಮಾಡುವುದು ಶೋಭೆಯಲ್ಲ. ಕೊಟ್ಟ ಮಾತನ್ನು ಉಳಿಸಿ ಮುನ್ನಡೆಯೋಣ. ಅವನಿಗೆ ಸ್ವಲ್ಪವೂ ಭಾಷೆಯಿಲ್ಲ, ಹೇಳಿದ ಮಾತಿಲ್ಲ ಅನಿಸಿಕೊಳ್ಳುವುದು ಬೇಡ. ಗುರುಹಿರಿಯರು, ಕಣ್ಣಿಗೆ ಕಾಣದ ನಮ್ಮನ್ನು ಮುನ್ನಡೆಸುವ ಮಹಾಶಕ್ತಿ, ನಮ್ಮೆಲ್ಲರನ್ನು ಹೊತ್ತ ಭೂಮಿತಾಯಿ ಮೆಚ್ಚುವಂಥ ಮಾತುಗಳನ್ನು ಆಡೋಣ. ಆಡುವ ಮಾತು(ಭಾಷೆ) ಚೆನ್ನಾಗಿರಲಿ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ