ಒಂದು ಒಳ್ಳೆಯ ನುಡಿ - 64

ಒಂದು ಒಳ್ಳೆಯ ನುಡಿ - 64

ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಡುವವನೇ ಜೀವನವನ್ನು ಜಯಿಸಿಯಾನು. ಅದುವೇ ಹತೋಟಿಯಲ್ಲಿ ಇಲ್ಲದವ ಏನನ್ನೂ ಸಾಧಿಸಲಾರ. ಬರಿದೆ ಬಾಯಿ ಮಾತಿನಿಂದ ಏನನ್ನೋ ಹೇಳುತ್ತಾ, ಉಪಯೋಗವಿಲ್ಲದ ವಿಷಯಾಸಕ್ತನಾಗಿರುವನು. ಇಂಥವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ತಾನೂ ಉತ್ತಮ ಜೀವನ ನಡೆಸಲಾರ. ಬೇರೆಯವರ ಬದುಕನ್ನು ಹಾಳುಮಾಡುವ ಬುದ್ಧಿ ಇಂಥವನಿಗೆ. ಅರಿಷಡ್ವರ್ಗಗಳ ದಾಸನೀತ. ನಾಲ್ಕು ಜನರ ಮಧ್ಯೆ ತಂದಿಟ್ಟು ಚಂದ ನೋಡುವವನು ಈತನು. ಇಂದ್ರಿಯಗಳ ದಾಸನಾಗುವುದರ ಬದಲು, ನಾವು ಹೇಳಿದಂತೆ ಕೇಳುವ ಹಾಗೆ ನೋಡಿಕೊಳ್ಳುವುದೇ ಜಾಣತನ.

ಸುಭಾಷಿತಗಳು ಆದರ್ಶ ಜೀವನದ ಮಾರ್ಗವನ್ನು ತೋರಿಸುವುದು.ಜೀವನಕ್ಕೆ ಹತ್ತಿರ, ಸಾಹಿತ್ಯವಾಗಿಯೂ ಪ್ರಾಶಸ್ತ್ಯ ವಿದೆ. ಬರಹಗಾರನಿಗೆ ಉತ್ತಮ ನಿಧಿ.

ಜೀತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ ವಿನಯಾದವಾಪ್ಯತೇ|

ಗುಣಾಧಿಕೇ ಪುಂಸಿ ಜನೋ ನುರಜ್ಯತೇ

ಜನಾನುರಾಗಪ್ರಭವಾ ಹಿ ಸಂಪದಃ||

ಇಂದ್ರಿಯಗಳು ವಶವರ್ತಿಯಾಗಿದ್ದರೆ ನಮ್ಮಲ್ಲಿ ವಿನಯಗುಣವು ಉಂಟಾಗುವುದು. ಇನ್ನೂ ಅನೇಕ ಸದ್ಗುಣಗಳು ವಿನಯದಿಂದ ಉದ್ಭವಿಸುವವು. ಅನೇಕ ಉತ್ತಮ ಗುಣಗಳನ್ನು ಹೊಂದಿರುವ ಸಜ್ಜನರನ್ನು ಜನರು ಮೆಚ್ಚುವರು. ಯಾರು ಜನರ, ಸಮಾಜದ ಪ್ರೀತಿ, ವಿಶ್ವಾಸ ಸಂಪಾದಿಸುವರೋ ಅವರು ಹೃದಯ ಶ್ರೀಮಂತಿಕೆ ಎಂಬ ಐಶ್ವರ್ಯ ಹೊಂದಿದವರು. ಮಾನವತೆಯೇ ದೊಡ್ಡ ಐಶ್ವರ್ಯ. ಅದನ್ನು ಗಳಿಸೋಣ, ಬೆಳೆಸೋಣ, ಹಂಚೋಣ.

ಆಧಾರ: ಸುಭಾಷಿತ ರತ್ನಾ ವಳಿ

ಸಂಗ್ರಹ: ರತ್ನಾ ಭಟ್ ತಲಂಜೇರಿ