ಒಂದು ಒಳ್ಳೆಯ ನುಡಿ - 65

ಒಂದು ಒಳ್ಳೆಯ ನುಡಿ - 65

ನಮ್ಮ ಹಿಂದಿನ ಚರಿತ್ರೆಯೋ, ಇತಿಹಾಸವೋ, ಓದಿದಾಗ, ರಾಜಾಶ್ರಯ ಇದ್ದವರು ಬೆಳಕಿಗೆ ಬೇಗನೆ ಬಂದರೆಂಬುದನ್ನು  ಅರಿತೆವು. ಕಾಳಿದಾಸ, ಪಂಪ, ರನ್ನ, ಭಾಸ, ರಾಘವಾಂಕ, ಭವಭೂತಿ ಮುಂತಾದವರು ಪ್ರಖ್ಯಾತಿ ಹೊಂದಿದವರಾಗಿದ್ದಾರೆ. ಗುರುತಿಸುವವರು ಇಲ್ಲವೆಂದಾಗ, ಬಡತನವೂ ಸೇರಿಕೊಂಡಾಗ ಪ್ರಯತ್ನ ವಿಫಲವಾಗಿ ಮೂಲೆ ಸೇರುತ್ತಾರೆ. ಹಾಗಾದರೆ ಆಶ್ರಯದಾತರಾಗಿ ಯಾರಾದರೂ ಇರಲೇಬೇಕು. ಇಲ್ಲದಿದ್ದಾಗ ನಮ್ಮಲ್ಲಿರುವ ಪ್ರತಿಭೆ ಮುರುಟಿಯೇ ಹೋಗಬಹುದು. ಎಲ್ಲಿ ಪ್ರೋತ್ಸಾಹ ಇರುವುದೋ ಅಲ್ಲಿ ಬೆಳೆಯಲು ಅವಕಾಶ ಇರುವುದು ಸಹಜ. ಹೇಗೆ ಸೂರ್ಯ ಕಿರಣಗಳ ಸ್ಪರ್ಶದಿಂದ ತಾವರೆ ಅರಳಿ ನಗುವುದೋ ಹಾಗೆ.

*ತದಾ ಜಾಯಂತೇ ಗುಣಾಃ*

*ಯದಾ ತೇ ಸಹೃದಯ್ಯೆರ್ಗೃಹ್ಯಂತೇ|*

*ರವಿಕಿರಣಾನುಗೃಹೀತಾನಿ*

*ಭವಂತಿ ಕಮಲಾನಿ ಕಮಲಾನಿ||*

ಸಹೃದಯರು, ಒಳ್ಳೆಯ ಮನಸ್ಸಿನವರು ಯಾವಾಗಲೂ ತಾನು ಬೆಳೆಯುವುದರ ಜೊತೆಗೆ ಬೇರೆಯವರ ಬೆಳವಣಿಗೆಗೆ, ಏಳಿಗೆಗೆ ಪ್ರೋತ್ಸಾಹ ನೀಡುವರು.ಅವರು ಗುರುತಿಸಿದಾಗಲೇ ಗುಣಗಳು ಸದ್ಗುಣಗಳಾಗಿ ಹೊರಹೊಮ್ಮಲು ಸಾಧ್ಯ.  ನೇಸರನ ಬಿಸಿಲಿನ ಪ್ರಭಾವದಿಂದ ತಾವರೆ ನಳನಳಿಸುವಂತೆ. ಆಗಲೇ ಕಮಲಗಳು ಕಮಲಗಳಾಗಲು ಸಾಧ್ಯ.

ಮುಚ್ಚಿದ್ದ ಕಮಲದ ಸೌಂದರ್ಯ ಹೇಗೆ ತಿಳಿಯುವುದು? ಬಣ್ಣಗಳ ವೈಭವ ಕಾಣಬೇಕಾದರೆ ಆ ಪುಷ್ಪ ಅರಳಬೇಕು. ಇದೇ ರೀತಿ ಕವಿಗಳ, ಪಂಡಿತರ, ಕಲಾವಿದರ ಪ್ರತಿಭೆ ಹೊರಹೊಮ್ಮಲು ಆಶ್ರಯ ಮತ್ತು ಪ್ರೋತ್ಸಾಹ ಬೇಕು.

ಆಕರ:ಸಂಸ್ಕೃತ ಸುಭಾಷಿತ

ಸಂಗ್ರಹ: ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ