ಒಂದು ಒಳ್ಳೆಯ ನುಡಿ (7) - ಸತ್ಯ-ಸುಳ್ಳು

ಒಂದು ಒಳ್ಳೆಯ ನುಡಿ (7) - ಸತ್ಯ-ಸುಳ್ಳು

'ಸತ್ಯವಂತರಿಗಿದು ಕಾಲವಲ್ಲ' ಎಷ್ಟೋ ಜನ ಹೇಳುವುದು ಕೇಳಿದ್ದೇವೆ. ಸತ್ಯ ನುಡಿದವ ಹೊಂಡಕ್ಕೆ ಬಿದ್ದ. ಅವನಿಗೆ ಯಾಕೆ ಬೇಕಿತ್ತು ಸತ್ಯ ಹೇಳುವ ಕೆಲಸ, ಹೀಗೆಲ್ಲ ಹೇಳುವುದು, ಕೆಲವು ಸಲ ಕಷ್ಟಕ್ಕೆ ಸಿಲುಕಿದ್ದೂ ಇದೆ. ಹೌದು ದಾರಿಯಲ್ಲಿ ಹೋಗುವಾಗ ಆದ ಒಂದು ಅಪಘಾತವನ್ನು ನೋಡಿ, ಅವನನ್ನು ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದರೆ, ಅವನನ್ನೇ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ತಲೆತಿನ್ನುವುದೂ ಇದೆ. ಇದರಿಂದ ಅವನ ಸಮಯವೂ ನಷ್ಟ, ಕೆಲಸವೂ ಇಲ್ಲ. ಇದರಿಂದಲಾಗಿಯೇ ನೋಡಿಯೂ ನೋಡದ ಹಾಗೆ ಮಾಡಿಕೊಂಡು ಹೆಚ್ಚಿನವರು ತಮ್ಮ ಪಾಡಿಗೆ ತಾವಿರುತ್ತಾರೆ. ಹಾಗಾದರೆ ಸತ್ಯ ಬೇಡವೇ? ಸತ್ಯಕ್ಕೆ ಸಾವಿಲ್ಲ, ಸತ್ಯಕ್ಕೆ ಜಯ ಖಂಡಿತಾ ಇದೆ. ನಾವು ಸತ್ಯವಂತರಾಗಿಯೇ ಜೀವಿಸಲು ಕಲಿಯೋಣ.

ಸುಳ್ಳು-ಒಂದೇ ನಾಣ್ಯದ ಎರಡು ಮುಖಗಳು ಸತ್ಯ-ಸುಳ್ಳು. ಸುಳ್ಳು ಹೇಳಬಹುದಂತೆ, ಹೇಗಿದ್ದ ಸುಳ್ಳು, ನಮ್ಮ ಜೀವಹೋಗುವ ಪ್ರಸಂಗ ಬಂದಾಗ ಅಲ್ಲಿ ಸುಳ್ಳು ಸಹಕಾರಿಯಾಗಬಲ್ಲುದು. ಹಾಗೆಂದು ಸುಳ್ಳನ್ನೇ ಬಂಡವಾಳ ಮಾಡಿ ಬದುಕುವವರು ಬಹಳಷ್ಟು ಮಂದಿ ಇದ್ದಾರೆ. ಅವನು ಸಾಮಾನ್ಯದವ ಅಲ್ಲ, ಕಣ್ಣಿಗೆ ಕಟ್ಟಿದ ಹಾಗೆ, ತಲೆಗೆ ಬಡಿವ ಹಾಗೆ, ಎಲ್ಲರೂ ನಂಬುವ ಹಾಗೆ ಸುಳ್ಳನ್ನು ಹೇಳುವುದರಲ್ಲಿ ನಿಸ್ಸೀಮ ಹೇಳುವುದು ಕೇಳಿದ್ದೇವೆ.

ಸುಳ್ಳು ಒಮ್ಮೆಗೆ ಮಾತ್ರ ಹೇಳಿದವನ ಒಳಮನಸ್ಸು ಎಚ್ಚರಿಕೆ ನೀಡ್ತಾ ಇರ್ತದೆ, ನೀನು ತಪ್ಪು ಮಾಡಿದ್ದಿ ಎಂಬುದಾಗಿ. ಸುಳ್ಳಿನ ಮೇಲೆ ಸುಳ್ಳು, ಅದನ್ನು ಮುಚ್ಚಿಹಾಕಲು ಮತ್ತೊಂದು ‌ಸುಳ್ಳು , ಹೀಗೆ ಸುಳ್ಳಿನ ಸರಮಾಲೆ ಹೆಣೆಯುತ್ತಾ ಹೋಗಿ ಒಂದು ದಿನ ಸಿಕ್ಕಿ ಬಿದ್ದಾಗ ಬದುಕು ಮೂರಾಬಟ್ಟೆಯಾಗುವುದು. ಬೇಕಾ ನಮಗೆ ಇಂಥ ಜೀವನ?

ಸ್ನೇಹಿತರೆ ಸತ್ಯ-ಸುಳ್ಳುಗಳ ಮಧ್ಯೆ ಒದ್ದಾಡುವುದ ಬಿಟ್ಟು ಮಾನವೀಯತೆಯ ಬದುಕನ್ನು ಕಟ್ಟಿಕೊಳ್ಳೋಣ.ಸತ್ಯಕ್ಕೆ ಎಂದಿದ್ದರೂ ಜೈ ಅನ್ನೋಣ. ಪುಣ್ಯಕೋಟಿಯ ಕಥೆ ನಮಗೆಲ್ಲ ತಿಳಿದಿದೆ, ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧುಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಅಲ್ಲವೇ? ಸತ್ಯ-ಸುಳ್ಳುಗಳ ಮಧ್ಯೆಯೇ ನಾವಿದ್ದು, ಆ ಕಣ್ಣಿಗೆ ಕಾಣದ ಶಕ್ತಿಯು ಮೆಚ್ಚುವಂತಹ ಕೆಲಸ, ಕರ್ತವ್ಯ ಮಾಡೋಣ.

-ರತ್ನಾ ಭಟ್ ತಲಂಜೇರಿ