ಒಂದು ಒಳ್ಳೆಯ ನುಡಿ - 70
ಕೆಟ್ಟ ಮನಸ್ಸಿನವರ ಮಾತುಗಳಿಂದ ಒಳ್ಳೆಯವರಿಗೆ ಹಾನಿಯೂ ಇಲ್ಲ, ಗೌರವವೂ ಕಡಿಮೆಯಾಗುವುದಿಲ್ಲ. ಒಂದು ಗಾದೆ ಮಾತು ಉಂಟಲ್ಲ ‘ಬೊಗಳುವ ನಾಯಿ ಕಚ್ಚುವುದಿಲ್ಲ ಕಚ್ಚುವ ನಾಯಿ ಬೊಗಳುವುದಿಲ್ಲ’ ಎಂಬುದಾಗಿ. ಆಯಾಸ ಆಗುವಾಗ ಮಾತು ನಿಲ್ಲಿಸುವರು. ಆದಷ್ಟೂ ಅವರನ್ನು ಸರಿಮಾಡಲು, ತಿದ್ದಲು ನೋಡುವುದು ಮನುಷ್ಯ ಧರ್ಮ. ಎಷ್ಟು ಮಾತ್ರಕ್ಕೂ ಆಗದಿದ್ದರೆ ದೂರ ಇದ್ದರೆ ಉತ್ತಮ. ಹೊಳೆಯುವ ನವರತ್ನಗಳ ಮೇಲೆ ಧೂಳು ಕುಳಿತರೆ ಅದರೆ ಬೆಲೆ ಕಡಿಮೆಯಾಗದಲ್ಲವೇ?
ಹಾಗೆ ತಿಳಿದುಕೊಂಡರಾಯಿತು. ಮೂರ್ಖರ ಸಹವಾಸ ಯಾವತ್ತೂ ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಅವಿವೇಕಿಗಳನ್ನು ಹತ್ತಿರ ಸಹ ಸೇರಿಸಿಕೊಳ್ಳಬಾರದು. ಸಾಧಕ ಬಾಧಕಗಳನ್ನು ಅರಿಯದವನು ಯಾವತ್ತೂ ಅಪಾಯಕಾರಿ. ವಿಚಾರಮತಿ ಅಲ್ಲದವನ ಹತ್ತಿರ ಏನೂ ಹೇಳಬಾರದು. ಹೇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಟ್ಟವರ ಮಾತುಗಳನ್ನು ಕೇಳಿದರೆ ಆತ್ಮಪರಿಶೀಲನೆ ಮಾಡಿ, ಆತ್ಮಸಾಕ್ಷಿಗೆ ಸರಿಯಾಗಿ ವರ್ತಿಸಬೇಕು. ಅವಿವೇಕಿಗಳನ್ನು ತಿದ್ದಲು ಹೋದರೆ, ನಮ್ಮ ಮೈಮೇಲೆ ನಾವೇ ಚಪ್ಪಡಿಕಲ್ಲು ಹಾಕಿಕೊಂಡಂತೆಯೇ ಸರಿ. ನಮ್ಮ ಜೀವ ಜೀವನ ಎರಡೂ ನಮ್ಮ ಕೈಯಲ್ಲೇ ಇದೆ. ಅವರಿವರ ಮಾತಿಗೆ ಹಿತ್ತಾಳೆ ಕಿವಿಯಾಗಿ ನಾವು ಚಟ್ಟಕ್ಕೇರುವಂತಾಗಬಾರದು. ಯಾರು ಏನೇ ಹೇಳಿದರೂ ಆಲೋಚನೆ ನಮ್ಮದು, ತಲೆಯೊಳಗಿನ ಬುದ್ಧಿ ನಮ್ಮದು. ಜೀವನವೆಂಬ ಈ ಮಹಾಸಾಗರದಲ್ಲಿ ಹದವರಿತು, ಅಂಜದೆ, ಅಳುಕದೆ, ಧೈರ್ಯದಿಂದ ಈಜಿ ದಡ ಸೇರುವುದೇ ಜಾಣತನ. ಯಾರಾದರೂ ಬಾಯಿತಪ್ಪಿ ದುರ್ವಚನಗಳನ್ನು ಹೇಳಿದರೆ ಸಹನೆಯಿಂದ ಆಲಿಸಿ, ಮೌನವಾಗಿ ಯೋಚಿಸಿ ಎದುರಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ