ಒಂದು ಒಳ್ಳೆಯ ನುಡಿ - 77
*ವಸುದೇವ ಸುತಂ ದೇವಂ*
*ಕಂಸ ಚಾಣೂರ ಮರ್ಧನಮ್*
*ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ*
ದೇವನೊಬ್ಬ ನಾಮಹಲವು ಭಗವಾನ್ ಶ್ರೀಕೃಷ್ಣನಿಗೆ ಅನ್ವಯ. ಭಕ್ತರ ಕಾಯುವ ದೇವ. ರುಕ್ಮಿಣಿ ಪತಿ. ರಾಧೆಯ ಪ್ರಿಯತಮ. ಪಾರ್ಥನ ಸಖ. ಮನಸ್ಸಿನ ಮಾತುಗಳ ಅರಿತು ನಡೆಯುವ. ಮನಸಿಜಪಿತ. ಜಗದ ತಂದೆ. ಧರ್ಮದ ತಳಹದಿಯಡಿ ಸೂತ್ರವ ಕೈಗೊಂಡವ. ಭಗವದ್ಗೀತೆ ಸಾರಿದ ಪ್ರಪಂಚದ ಗುರು. ಕಾಯಕದಲ್ಲಿ ಕರ್ಮವನ್ನು ಸಾಧಿಸೆಂದು ತೋರಿಸಿಕೊಟ್ಟ ಮಹಾನುಭಾವ. ಕಷ್ಟ ಬಂತೆಂದು ಹಿಮ್ಮೆಟ್ಟದೆ ಮುಂದೆ ನೋಡೆಂದು ಸಾರಿದವ, ತಿಳುವಳಿಕೆ ನೀಡಿದವ. ಬಂಧುಗಳಾದರೂ ದುಷ್ಟರನ್ನು ಸದೆಬಡಿಯಬೇಕೆಂದು ಹೇಳಿದ ದಾರ್ಶನಿಕ. ಗೆಲ್ಲುವೆನೆಂಬ ಆತ್ಮವಿಶ್ವಾಸ ಇರಲೇಬೇಕು ಎಂಬ ತತ್ವವನ್ನು ಎತ್ತಿ ಹಿಡಿದವ. ಒಂದನ್ನು ಪಡೆಯಲು ಇನ್ನೊಂದನ್ನು ತ್ಯಾಗಮಾಡಬೇಕೆಂಬ ಸಂದೇಶ ಸಾರಿದವ.
ಕರ್ಮಣ್ಯೇ ವಾಧಿಕಾರಾಸ್ತೆ ಮಾಫಲೇಶು ಕದಾಚನ| ಮಾಕರ್ಮ ಫಲಹೇತುರ್ಭೂರ್ಮಾ ತೇ ಸಂಗೋಸ್ತ್ವ ಕರ್ಮಣಿ|| ಕರ್ಮ, ಕೆಲಸ, ಕಾಯಕ. ಶ್ರದ್ಧಾಭಕ್ತಿಗಳಿಂದ ಮಾಡಬೇಕು, ಫಲ ಅಪೇಕ್ಷೆ ಸಲ್ಲದು, ಯೋಗಭಾಗ್ಯಗಳಲ್ಲಿದ್ದರೆ ಸಿಗುತ್ತದೆ (ನಾವು ನೆಟ್ಟು ಬೆಳೆಸಿದ ಮರದ ಹಣ್ಣು ನಮಗೇ ಸಿಗಬೇಕೆಂಬ ಹಂಬಲ ಬೇಡ) ದುಡಿದು ಉಣ್ಣಬೇಕೆಂಬ ಸಂದೇಶ. ಭಗವಂತನ ಕೊಳಲು ಎನ್ನುವುದು ಬರಿಯ ಸಾಧನವಲ್ಲ ಅದರ ನಿನಾದವೇ ಸಕಲ ಜೀವರಾಶಿಗಳಿಗೆ ಆನಂದಮಯ. ತಾನೂ ಸಂತಸ ಹೊಂದಿ, ಇತರರನ್ನು ಸಂತಸಗೊಳಿಸುವ ಮಹಾ ಸಂದೇಶ ಕೃಷ್ಣನ ಕೊಳಲನಾದದಲ್ಲಿದೆ. ಕೊಳಲಿನಲ್ಲಿ ಯಾವುದೇ ಗಂಟುಗಳಿಲ್ಲ. ಅದೇ ರೀತಿ ನಾವಾಡುವ ಮಾತುಗಳಲ್ಲಿಯೂ ಗಂಟುಗಳು, ವೈರತ್ವ, ಬೇರೇಯೇ ದೃಷ್ಟಿ ಇರಬಾರದೆಂಬ ಭಾವವೂ ಇದೆ. ನಮ್ಮಲ್ಲಿ ಯಾರಾದರೂ ಸಲಹೆ ಕೇಳಿದರೆ ಕೊಡಬೇಕು, ಆಡುವ ಮಾತಿನಲ್ಲಿ ಮಧುರತೆಯಿರಬೇಕು ಇದೆಲ್ಲ ಶ್ರೀ ಕೃಷ್ಣ ನಮಗಿತ್ತ ದಿವ್ಯ ಸಂದೇಶ.(ಪಾಲನೆ ಇದೆಯೇ? ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಷ್ಟೆ)
ದೇವನ ನವಿಲುಗರಿಯ ಪಟ್ಟೆ ಚುಕ್ಕಿಗಳೇ ಆಕರ್ಷಕ. ಮುಕುಟಕ್ಕೆ ಶೋಭೆ. ಗಾಢ ಬಣ್ಣ, ತಿಳಿಯಾದ ಬಣ್ಣ ಎರಡೂ ಇದೆ. ಜೀವನದ ಎಡರು ತೊಡರುಗಳನ್ನು, ಸುಖ-ದುಃಖವನ್ನು, ಸಮಚಿತ್ತದಿಂದ ಕಾಯ್ದು ಮುಂದುವರಿಯಿರಿ ಎಂಬ ಸಂದೇಶ ಸಾರುತ್ತಿದೆ ಈ ನವಿಲುಗರಿಯ ಬಣ್ಣಗಳು. ಪರಿಶುದ್ಧ ಪ್ರೇಮದ ಸಾರವೂ ಅಡಗಿದೆ. ಒಳಗೊಂದು ಹೊರಗೊಂದು ಬೇಡ. ತಿಳಿಯಾದ ನಿರ್ಮಲ ನೀರಿನಂತೆ ನಮ್ಮ ಮನಸ್ಸು ಇರಲಿ.
ಸಕಲಕಲಾವಲ್ಲಭ ,ವಿಶ್ವಚೈತನ್ಯದಾಯಕ, ಭಕ್ತಜನಸುರಧೇನು, ಭಕ್ತವತ್ಸಲ, ಅಸುರಾರಿ, ಮುರವೈರಿ, ದುಷ್ಟಶಿಕ್ಷಕ - ಶಿಷ್ಟರಕ್ಷಕ, ಜಗದ್ಗುರು ಶ್ರೀಕೃಷ್ಣನಿಗೆ ನಮೋನಮಃ
-ರತ್ನಾ ಭಟ್ ತಲಂಜೇರಿ
ಬಾಲಕೃಷ್ಣನ ರೂಪದರ್ಶಿ: ಆರ್ಯನ್ ಜಿ.ಎಸ್., ಕುಂಪಲ, ಮಂಗಳೂರು