ಒಂದು ಒಳ್ಳೆಯ ನುಡಿ (8) - ಕೃತಜ್ಞತೆ ಹಾಗೂ ಕೃತಘ್ನತೆ

ಒಂದು ಒಳ್ಳೆಯ ನುಡಿ (8) - ಕೃತಜ್ಞತೆ ಹಾಗೂ ಕೃತಘ್ನತೆ

ನಾವು ಮಾಡಿದ ಯಾವುದೇ ಉತ್ತಮ ಕೆಲಸಕ್ಕೆ ಸಾಧನೆಗೆ ಅಭಿನಂದನೆಗಳು ಹೇಳುತ್ತೇವೆ. ಗಳಿಸಿದಾಗ, ಅದನ್ನು ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳು, ನಮನಗಳು, ವಂದನೆಗಳು, ಧನ್ಯವಾದಗಳು ಹೀಗೆ ಬೇರೆ ಬೇರೆ ಪದಗಳಿಂದ ಉಪಕಾರ ಸ್ಮರಣೆ ಮಾಡುತ್ತೇವೆ. ಕೆಲವರ ಮನೋಭಾವ ತೆಗೆದುಕೊಳ್ಳುವವರೆಗೆ ಮಾತ್ರ, ಸಿಕ್ಕಿದ ಮೇಲೆ ಒಂದು ಕೃತಜ್ಞತೆ ಸಹ ಹೇಳುವ ಅಭ್ಯಾಸವಿಲ್ಲ. ಇದನ್ನೇ ಕೃತಘ್ನತೆ ಹೇಳಬಹುದು. ಮಾಡಿದ ಉಪಕಾರ ಸ್ಮರಣೆ ಇಲ್ಲದವರೇ ಕೃತಘ್ನತೆಯನ್ನು ಹೊಂದಿದವರು.

ನಮ್ಮ ಬಾಳಿನುದ್ದಕ್ಕೂ ಎಷ್ಟೋ ಜನ ಸಹಕಾರ ನೀಡುತ್ತಾರೆ, ಕೃತಜ್ಞತೆ ಹೇಳಿದರೆ ನಮಗೇನು ನಷ್ಟ? ಕೊಟ್ಟವನಿಗೂ ಹೃದಯ ತುಂಬಿ ಬರುತ್ತದೆ. ಇನ್ನೊಮ್ಮೆ ಸಹಾಯ ಮಾಡಲು ಮನಸ್ಸಾಗುತ್ತದೆ. ಹಾಗೆ ಅಂತ ಪದೇಪದೇ ಕೈಚಾಚುವುದು ಒಳ್ಳೆಯದಲ್ಲ. ಅದನ್ನು ದುರುಪಯೋಗ ಎನ್ನಬಹುದು.

ಸ್ನೇಹದಲ್ಲಿ ಒಡಕು ಬಂದಾಗ, ಅವನಿಗೆ ಮಾಡಿದ ಉಪಕಾರವಿಲ್ಲ ಹೇಳುವುದು ಕೇಳಿದ್ದೇವೆ. ಸ್ನೇಹ ಎನ್ನುವ ಪದವೇ ಚಂದ, ಹಾಲಿನಷ್ಟು ಬಿಳುಪು, ಪವಿತ್ರ. ಕೃತಘ್ನತೆ ಮಧ್ಯೆ ಪ್ರವೇಶ ಆದೊಡನೆ ಬಿರುಕು ಸಾಮಾನ್ಯ. ಇಬ್ಬರೊಳಗೆ ತಂದಿಟ್ಟು ಚಂದ ನೋಡಿ, ಅಪಹಾಸ್ಯ ಮಾಡುವವರೇ ತುಂಬಿರುವ ಈ ಕಾಲಘಟ್ಟದಲ್ಲಿ ಜಾಗರೂಕರಾಗಿದ್ದಷ್ಟೂ ನಮಗೆ ಕ್ಷೇಮ. ಉಪಕಾರ ಸ್ಮರಣೆ ಎನ್ನುವುದು ಪರ್ವತದಷ್ಟು ಅಚಲವಾಗಿರಬೇಕು. ನಂಬಿಕೆ ವಿಶ್ವಾಸಗಳನ್ನು ಯಾವತ್ತೂ ಉಳಿಸಿಕೊಂಡಲ್ಲಿ ಬದುಕು ಬಂಗಾರವಾಗಬಲ್ಲುದು. ನಮ್ಮ ಜೀವನದಲ್ಲಿ ಬಂದು ಹೋಗುವ ಹಿರಿಯರು, ಗುರುಸ್ಥಾನದಲ್ಲಿರುವವರು, ಸಹಾಯಹಸ್ತ ಚಾಚಿದವರು, ಸ್ನೇಹಿತರು, ಕಛೇರಿಯ ಒಡನಾಡಿಗಳು, ಮೇಲಾಧಿಕಾರಿಗಳು ಹೀಗೆ ಹತ್ತು ಹಲವು ಮಂದಿ ಇರಬಹುದು , ಅವರಿಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸೋಣ. ನಮ್ಮ ನಿಲುವುಗಳು ವಜ್ರದಷ್ಟು ಕಠಿಣವಾಗಿರಬೇಕು. ಯಾರು ಏನೇ ಹೇಳಿದರೂ ನಾವು ಹಿತ್ತಾಳೆ ಕಿವಿಯವರಾಗಿರಬಾರದು.ದೃಢ ವಿಶ್ವಾಸವೇ ತಳಪಾಯವಾಗಿದ್ದರೆ ಚಂದ.

ಸ್ನೇಹ, ದ್ರೋಹ, ಉಪಕಾರದ ವಿಷಯದಲ್ಲಿ ಕೃತಘ್ನತೆ, ನಂಬಿದವಗೆ ವಂಚನೆ ಎಸಗುವುದು, ಇವೆಲ್ಲವೂ ಅಶುಭ ಗುಣಗಳು, ನಮ್ಮ ಅಧಃಪತನಕ್ಕೆ ಕಾರಣವಾಗಬಹುದು. ಸೌಜನ್ಯತೆ ಯಾವಾಗಲೂ ಉನ್ನತಿಯನ್ನು ಹೊಂದುವುದು. ಮಾಡಿದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸೋಣ, ಕೃತಘ್ನತೆಯನ್ನು ಅಳಿಸಿಹಾಕೋಣ.

-ರತ್ನಾ ಭಟ್ ತಲಂಜೇರಿ