ಒಂದು ಒಳ್ಳೆಯ ನುಡಿ - 85

ಯಾವುದೇ ಪರೀಕ್ಷೆಗಳಿಲ್ಲದೇ ನಾವು ಯಾವುದಾದರೂ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದುವೇಳೆ ಪಡೆಯುತ್ತೇವೆ ಎಂದಾದರೆ, ಅದು ವಾಮದಾರಿಯಲ್ಲಿ ಆಗಿರಬೇಕಷ್ಟೆ. ಪರೀಕ್ಷೆಗಳನ್ನು ಎದುರಿಸಿಯೇ ಪದವಿ ಪಡೆಯೋಣ.
ಪರೀಕ್ಷೆಗೆ ಅಡ್ಡಿ ಆತಂಕ ಹಲವಾರು ಇರಬಹುದು. ವಿಘ್ನಗಳಿಲ್ಲದೆ ಯಾವ ಕೆಲಸ ಗಳೂ ಆಗುವುದು ಬಹಳ ಕಡಿಮೆ. ಅದನ್ನೆಲ್ಲ ದಾಟಿ ಮುಂದೆ ಹೋಗೋಣ ಆಗದೆ? ಇದೇ ರೀತಿ ಜೀವನದ ಉದ್ದ ಹಾದಿಯಲಿ ಅನೇಕ ಪರೀಕ್ಷೆಗಳು ಎದುರಾಗುವುದು ಸಹಜ. ಅದನ್ನು ದಾಟಲು ಹರಸಾಹಸ ಮಾಡಬೇಕು. ಮೊದಲೇ ಮಾಡಿಟ್ಟ ಗಂಟು ಇದ್ದವನಿಗೆ ತೊಂದರೆಯಿಲ್ಲ. ಆದರೆ ಸಾಮಾನ್ಯವಾಗಿ ಅಲ್ಲಿಂದಲ್ಲಿಗೆ ಇರುವವ ಕಷ್ಟ ಪಡಬೇಕು. ಅನ್ನಕ್ಕಾಗಿ ಹೊಸ ಯೋಜನೆ ಹಾಕಿಕೊಳ್ಳಬೇಕು. ಈ ಕೊರೊನಾ ಎಂಬುದು ಬಹಳಷ್ಟು ಪಾಠ ಕಲಿಸಿದೆ ನಮಗೆ. ಇದ್ದ ಕೆಲಸ ಹೋಗಿದೆ. ಬೇಕಾದಷ್ಟು ದುಡಿಮೆ ಇಲ್ಲ. ತೆಗೆದ ಸಾಲ ಕಟ್ಟಲು ಉತ್ಪತ್ತಿ ಇಲ್ಲ. ಮನೆಯ ಸದಸ್ಯರು, ಬಂಧುಗಳು, ನೆರೆಹೊರೆಯವರನ್ನು ಕಳಕೊಂಡಿದ್ದೇವೆ. ಒಬ್ಬರಿಗೊಬ್ಬರು ಸಂಹವನ ಇಲ್ಲ. ಸಂಬಂಧಗಳು ದೂರವಾಗಿದೆ. ಸಾಂತ್ವನಗಳಿಲ್ಲ. ಮಕ್ಕಳ ಆಟಪಾಠಗಳು ಎಂದಿನಂತೆ ನಲಿವು ಗದ್ದಲಗಳಲ್ಲಿ ಇಲ್ಲ. ಆದರೂ ಬದುಕಬೇಕು. ಈಸಬೇಕು ಈ ಸಂಸಾರದಲ್ಲಿ. ಕಾಲ ಎಲ್ಲವನ್ನೂ ಕಲಿಸುತ್ತದೆ. ಹೋದ ಹಾಗೆ ನಾವು ಹೊಂದಾಣಿಕೆಯಿಂದ ಹೋಗಬೇಕು. ದಾರಿಯಲ್ಲಿ ನಡೆಯುವಾಗ ಮುಳ್ಳು ಸಿಕ್ಕಿದರೆ ಅದನ್ನೆತ್ತಿ ಬದಿಯಲ್ಲಿ ಹಾಕಿ ಮುಂದುವರಿಯುವ ಹಾಗೆ ಹೋಗಲು ಕಲಿಯೋಣ. ಉಸಿರು ಇರುವವರೆಗೆ ಬದುಕಿನ ಹೋರಾಟ ಇರಲೇ ಬೇಕಲ್ಲ. ನಿರಾಸೆ ಬೇಡ. ಒಂದಲ್ಲ ಒಂದು ಕೆಲಸವನ್ನು ಹುಡುಕಿ ಜೀವನ ಸಾಗಿಸುವ ಕಲೆಗಾರನಾಗುವುದು ಮುಖ್ಯ ಈ ಸಂದರ್ಭದಲ್ಲಿ ‘ಹಸಿವು ಎಲ್ಲವನ್ನೂ ಕಲಿಸುವ ಪಾಠಶಾಲೆ’ ಇರುವುದರಲ್ಲಿ, ಗಳಿಸಿದ್ದರಲ್ಲಿ ತೃಪ್ತಿ ಕಾಣುತ್ತ ಜೀವಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ