ಒಂದು ಒಳ್ಳೆಯ ನುಡಿ - 87
ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ ಆಗಬೇಕೆಂದು' ಹೇಳುವ ಮನಸ್ಸು ಕಾಣಬಹುದು. ಸಜ್ಜನರು ಬಿದ್ದವನ ಕೈಹಿಡಿದು ಏಳಿಸಿಯಾನು. ಮೂರ್ಖನು ನೋಡುತ್ತಾ ನಿಂತಾನು. ದುರ್ಜನರು ಅಪಹಾಸ್ಯ ಮಾಡಿಯಾರು. ಉತ್ತಮರು ಎಬ್ಬಿಸಿ ನಾಲ್ಕು ಸಾಂತ್ವನದ ನುಡಿಗಳನ್ನು ಹೇಳಿಯಾರು. ಪ್ರಪಂಚದ ರೀತಿನೀತಿಯೇ ಹಾಗಿದೆ. ನಮ್ಮ ಐದೂ ಬೆರಳುಗಳೇ ಒಂದೇ ಹಾಗಿಲ್ಲವಂತೆ. ಹಾಗೆಯೇ ಇದು ಸಹ.
*ಗಚ್ಛತಃ ಸ್ಖಲನಂ ಕ್ವಾಪಿ*
*ಭವತ್ಯೇವ ಪ್ರಮಾದತಃ|*
*ಹಸಂತಿ ದುರ್ಜನಾಸ್ತತ್ರ*
*ಸಮಾದಧತಿ ಸಾಧವಃ||*
ಯಾವುದೇ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಾಗ, ಮೊದಮೊದಲು ಅಡಚಣೆಗಳು ಸಹಜ. ಕಾಲೆಳೆಯುವವರೂ ಇರಬಹುದು. ಅಡ್ಡಿ ಆತಂಕಗಳು ತಲೆದೋರಬಹುದು. ಆ ಚಿಂತೆಯಲ್ಲಿರುವಾಗ ಅಪಹಾಸ್ಯ ಮಾಡುವುದು, ವ್ಯಂಗ್ಯವಾಡುವುದು ದುಷ್ಟರ ಗುಣ. ಧೈರ್ಯವ ತುಂಬಿ ‘ಹೋಗು ಮುಂದುವರಿ, ಎಲ್ಲಾ ಒಳ್ಳೆಯದಾಗುತ್ತದೆ’ ಎಂದು ಉತ್ಸಾಹದ ಮಾತುಗಳನ್ನು ಸಜ್ಜನರು ಮಾತ್ರ ಹೇಳಿಯಾರಷ್ಟೆ.
ಓರ್ವ ಮಹನೀಯರು ನನಗೆ ಹೇಳಿದ ವಿಷಯ 'ಅವರು ಅಧ್ಯಾಪಕ ವೃತ್ತಿಗೆ ಸೇರಿದಾಗ ‘ಇವ ಇನ್ನು ಮಾಷ್ಟ್ರಾಗಿ ಪಾಠ ಮಾಡ್ಲಿಕ್ಕುಂಟೇ? ಇಂಥವರಿಗೆ ತೋಟಕ್ಕೆ ಗೊಬ್ಬರ ಹೊರುವ ಕೆಲಸ ಒಳ್ಳೆಯದೆಂದು’ ನಾಲ್ಕು ಜನ ಹಿರಿಯರು ಕುಳಿತ ಸಭೆಯಲ್ಲಿ ವ್ಯಂಗ್ಯವಾಡಿದ್ದಾರಂತೆ. ಕಾರಣ ಇಷ್ಟೆ. ಆಗ ಬಡವರು ಅಂದರೆ ಹಣ ಇದ್ದವರು ತಾತ್ಸಾರದಿಂದ ನೋಡುವ ಕಾಲ. ತಾರತಮ್ಯ ತುಂಬಾ ಇತ್ತು. ನಿಜವಾಗಿಯೂ ಆ ಹುಡುಗ ಎಲ್ಲದರಲ್ಲಿಯೂ ನೂರಕ್ಕೆ ನೂರು ತೆಗೆಯುತ್ತಿದ್ದ ಪ್ರತಿಭಾವಂತ. ಆದರೆ ಬಡತನಕ್ಕೆ ಅಂಕಗಳು ಆಕಾಲಕ್ಕೆ ಕಾಣುತ್ತಿರಲಿಲ್ಲ. ಅದೇ ಹುಡುಗ ಮುಂದೆ ಸಮಾಜದಲ್ಲಿ ಓರ್ವ ಉತ್ತಮ ಅಧ್ಯಾಪಕರಾಗಿ ಜನಾನುರಾಗಿಯಾದರು. ಈಗಲೂ ಇದ್ದಾರೆ. ಹೇಳಿದವರು ಈಗ ಇಲ್ಲ. ಕುಹಕಿಗಳಿಗೆ, ಅಹಂಕಾರಿಗಳಿಗೆ ತಾವೇ ಮೇಲೆಂಬ ಭಾವನೆ.
ಯಾರಿಗೆ ಆಗಲಿ ಸಹಕಾರ ಮಾಡಲು ಆಗದಿದ್ದರೆ ಬೇಡ, ಉತ್ಸಾಹ ತುಂಬೋಣ, ಅಪಹಾಸ್ಯ, ವ್ಯಂಗ್ಯ ಬೇಡ. ಎಲ್ಲರೂ ಮನುಷ್ಯರೇ ಅಲ್ಲವೇ? ಹಸಿವೆಗೆ ಅನ್ನವೇ ಆಗಬೇಕು, ಚಿನ್ನ ತಿನ್ನಲಾದೀತೇ?
ಸಂಗ್ರಹ:ರತ್ನಾ ಭಟ್ ತಲಂಜೇರಿ
ಆಕರ: ಸುಭಾಷಿತ ರತ್ನಾವಳಿ, ಚಿತ್ರ ಕೃಪೆ: ಇಂಟರ್ನೆಟ್ ತಾಣ