ಒಂದು ಒಳ್ಳೆಯ ನುಡಿ - 89
ಮಾನವ ಜನ್ಮ ಅತ್ಯಂತ ಶ್ರೇಷ್ಠವಂತೆ. ಹಾಗಿದ್ದರೂ ಸಹ ನಾವು ಆ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಬೇರೆಯವರ ಬಗ್ಗೆ ಮಾತಾನಾಡುವುದರಲ್ಲಿ, ಅವರ ಕುಂದುಕೊರತೆಗಳನ್ನು ಹೇಳುವುದರಲ್ಲಿಯೇ ಅರ್ಧ ಆಯುಷ್ಯ ಕಳೆಯುತ್ತಿದ್ದೇವೆ. ನಾವು ನಮ್ಮನ್ನೇ ಜಗತ್ತಿಗೆ ಒಡ್ಡಿಕೊಂಡಾಗ, ಉತ್ತಮ ಗುಣನಡತೆಗಳಿಂದ ಪ್ರಕಾಶಿಸಲು ಸಾಧ್ಯ. ಓರ್ವ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿರುವನೋ ಅವನಿಗೆ ಮತ್ತಷ್ಟೂ ಉತ್ಸಾಹದ ನುಡಿಗಳನ್ನು ಆಡುವುದರ ಮೂಲಕ ಪ್ರೋತ್ಸಾಹಿಸಬಹುದು. ಸಮಾಜಸೇವಾ ಕೆಲಸಕಾರ್ಯಗಳನ್ನು ಮಾಡುವವರ ಜೊತೆ ಸೇರಿಕೊಂಡು ಕಿಂಚಿತ್ ಸಹಕರಿಸಬಹುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸಹಕರಿಸಬಹುದು. ನಿಂದಕರು, ನಿಂದನೆ ಇರಬೇಕು ನಿಜ, ಅದೇ ನಮ್ಮ ಬೆಳವಣಿಗೆಗೆ ಅಡ್ಡಿಯಾಗುವಂತಿರಬಾರದಲ್ಲವೇ? ಉತ್ತಮರನ್ನು, ಹೃದಯವಂತರನ್ನು ಯಾವತ್ತೂ ನಿಂದಿಸಬಾರದು. ದ್ವೇಷ, ಅಸೂಯೆ ಒಳ್ಳೆಯದಲ್ಲ. ತನ್ನ ಪಾಲಿನ ಕರ್ತವ್ಯದಲ್ಲಿ ಲೋಪವೆಸಗಬಾರದು. ಬಹಳಷ್ಟು ಕೆಲಸ ಕಳ್ಳರನ್ನು ನಾವು ಕಾಣಬಹುದು. ಒಬ್ಬರ ಸೊತ್ತನ್ನು ಅಪಹರಿಸುವುದು ಮಾತ್ರ ಕಳ್ಳತನವಲ್ಲ. ತನ್ನ ಕೆಲಸದಲ್ಲಿ ವಿಮುಖನಾಗುವುದು, ಅಸಡ್ಡೆ ತೋರುವುದು ಸಹ ಕಳ್ಳತನವೇ. ಅಲ್ಲಿ ದೇಶದ ಹಣ ಎಷ್ಟು ಹಾಳಾಗುವುದು? ಸುಮ್ಮನೆ ಸಂಬಳ ಎಣಿಸುವುದು ಸರಿಯೇ? ತನ್ನ ಕರ್ತವ್ಯವನ್ನು ಲೋಪವಿಲ್ಲದಂತೆ ಮಾಡಲೇಬೇಕು. ದಿನದೂಡುವುದಲ್ಲ.
ಪರನಿಂದಾಸು ಪಾಂಡಿತ್ಯಂ ಸ್ವೇಷು ಕಾರ್ಯೇಷ್ವನುದ್ಯಮಃ/
ಪ್ರದ್ವೇಷಶ್ಚ ಗುಣಜ್ಞೇಷು ಪಂಥಾನೋ ಹ್ಯಾಪದಾಂ ತ್ರಯಃ//
ಜೀವನಕ್ಕೆ ಒಗ್ಗಿಕ್ಕೊಂಡು ಬದುಕನ್ನು ಅನುಭವಿಸೋಣ. ಕಷ್ಟಗಳನ್ನು ಮೈಮೇಲೆ ಎಳೆದು ಹಾಕದೆ ಬಾಳೋಣ.
(ಆಧಾರ:ಸರಳ ಸುಭಾಷಿತ)
ಸಂಗ್ರಹ: ರತ್ನಾಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ